ಮುಂಬೈ: ಮೆಕ್ಸಿಕೋ ಗಡಿಯಲ್ಲಿ ಗೋಡೆ ಕಟ್ಟುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಯನ್ನು ಟೀಕಿಸಿರುವ ಹಿರಿಯ ನಟ ರಿಷಿ ಕಪೂರ್, ನೆರೆಹೊರೆಯವರ ನಡುವೆ ಒಂದೇ ರೀತಿಯ ಸೇತುವೆ ಇರಬೇಕು - ಅದುವೆ ಪ್ರೀತಿಯ ಸೇತುವೆ ಎಂದಿದ್ದಾರೆ.
"ಇದೊಂದೇ ದಾರಿ - ನೆರೆಯವರ ಜೊತೆಗೆ ಸೇತುವೆ ಕಟ್ಟಿ. ಗೋಡೆಗಳನ್ನಲ್ಲ. ಅಮೆರಿಕಾ ಮೆಕ್ಸಿಕೋ ಜೊತೆಗೆ ಗೋಡೆ ಕಟ್ಟಲು ಹೊರಟಿದೆ. ಇದು ನಿಜಕ್ಕೂ ಸರಿಯಿಲ್ಲ. ನಾವು ಪ್ರೀತಿಯೊಂದಿಗೆ ಬದುಕಬೇಕು" ಎಂದು ರಿಷಿ ಟ್ವೀಟ್ ಮಾಡಿದ್ದಾರೆ.
ಹಾಗೆಯೇ ಪಾಕಿಸ್ತಾನಿಯರಿಗೆ ನನ್ನ ಹೆಸರು ಏಕೆ ತಿಳಿಯುವುದಿಲ್ಲವೋ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
"ಪಾಕಿಸ್ತಾನದ ಜನ ನನ್ನನ್ನು ರಾಶಿ ಎಂದು ಏಕೆ ಕರೆಯುತ್ತಾರೋ ತಿಳಿಯದು. ನನ್ನ ಹೆಸರು ರಿಷಿ. ಬಹುತೇಕ ಎಲ್ಲ ಸಮಯದಲ್ಲಿಯೂ ಅವರು ನನ್ನ ಹೆಸರನ್ನು ತಪ್ಪಾಗಿ ಉಚ್ಚರಿಸುತ್ತಾರೆ" ಎಂದಿದ್ದಾರೆ.
ಭಾರತೀಯ ಸಿನೆಮಾಗಳಲ್ಲಿ ಪಾಕಿಸ್ತಾನ ನಟರಿಗೆ ಅವಕಾಶ ನೀಡಬಾರದು ಎಂಬ ನಿಲುವನ್ನು ಕಳೆದ ವರ್ಷ ಖಂಡಿಸಿದ್ದ ರಿಷಿ ಬಾಲಿವುಡ್ ನಲ್ಲಿ ನಟಿಸುವ ಪಾಕಿಸ್ತಾನಿ ನಟರ ಪರವಾಗಿ ನಿಂತಿದ್ದರು.