
ಹೈದರಾಬಾದ್: ದುಬೈ ಮೂಲದ ಉದ್ಯಮಿ ಕನ್ನಡಿಗ ಬಿಆರ್ ಶೆಟ್ಟಿ ಅವರು ಸಾವಿರ ಕೋಟಿ ವೆಚ್ಚದ ಮಹಾಭಾರತ ಚಿತ್ರ ನಿರ್ಮಾಣ ವಿಚಾರ ಇನ್ನೂ ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಟಾಲಿವುಡ್ ನಿರ್ಮಾಪಕರೊಬ್ಬರು 500 ಕೋಟಿ ರು.ವೆಚ್ಚದಲ್ಲಿ ರಾಮಾಯಣ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಈ ಹಿಂದೆ ಟಾಲಿವುಡ್ ನಲ್ಲಿ ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರೊಂದಿಗೆ ಮಗಧೀರ ಎಂಬ ಚಿತ್ರ ನಿರ್ಮಾಣ ಮಾಡಿದ್ದ ನಿರ್ಮಾಪಕ ಅಲ್ಲು ಅರವಿಂದ್ ಅವರು ಈ ದುಬಾರಿ ರಾಮಾಯಣ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ನಿರ್ಮಾಪಕ ಅಲ್ಲು ಅರವಿಂದ್ ಅವರು ಈ ಬೃಹತ್ ಯೋಜನೆಗಾಗಿ ನಿರ್ಮಾಪಕರಾದ ನಮಿತ್ ಮಲ್ಹೋತ್ರಾ ಹಾಗೂ ಮಧು ಮಂಟೇನಾ ಅವರೊಂದಿಗೆ ಕೈಜೋಡಿಸಿದ್ದಾರೆ. ಈ ವಿಷಯವನ್ನು ನಿರ್ಮಾಪಕರಾಗಿರುವ ಮಧು, ನಮಿತ್ ಹಾಗೂ ಅಲ್ಲು ಅರವಿಂದ್ ಖಚಿತಪಡಿಸಿದ್ದಾರೆ.
ರಾಮಾಯಣ ಚಿತ್ರ ಮೂರು ಭಾಗಗಳಲ್ಲಿ ತಯಾರಾಗಲಿದ್ದು, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಲಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಬಹುತೇಕ ಮುಕ್ತಾಯವಾಗಿದ್ದು, ಪಾತ್ರಗಳಿಗೆ ನಟರ ಆಯ್ಕೆ ಇನ್ನೂ ಬಾಕಿ ಇದೆ. ಬಹುತೇಕ ತೆಲುಗು, ತಮಿಳು ಮತ್ತು ಬಾಲಿವುಡ್‌ನ ಸ್ಟಾರ್ ನಟರೇ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಹಿಂದೆ ಮಗಧೀರ ಎಂಬ ಐತಿಹಾಸಿಕ ಹಿನ್ನಲೆಯುಳ್ಳ ಚಿತ್ರ ಮಾಡಿದ್ದ ಅಲ್ಲು ಅರವಿಂದ್ ಅವರು ಬಳಿಕ ಐತಿಹಾಸಿಕ ಚಿತ್ರಗಳನ್ನು ಮಾಡಿರಲಿಲ್ಲ. ಇದೀಗ ರಾಮಾಯಣ ಚಿತ್ರದ ಮೂಲಕ ಮತ್ತೆ ಐತಿಹಾಸಿಕ ಚಿತ್ರಕಥೆಯತ್ತ ಮರಳಿದ್ದಾರೆ.
ರಮಾನಂದ ಸಾಗರ್ ಅವರು 1987ರಲ್ಲಿ 'ರಾಮಾಯಣ' ಕಥೆಯನ್ನು ಕಿರುತೆರೆಗೆ ತಂದಿದ್ದರು. ಅಲ್ಲಿ ಅರುಣ್ ಗೋವಿಲ್ ಮತ್ತು ದೀಪಿಕಾ ಚಿಖಾಲಿಯಾ ರಾಮ ಮತ್ತು ಸೀತೆಯಾಗಿ ಕಾಣಿಸಿಕೊಂಡಿದ್ದರು. ಇನ್ನು 2008ರಲ್ಲಿ ಪ್ರಸಾರವಾದ ಮತ್ತೊಂದು ರಾಮಾಯಣ ಧಾರಾವಾಹಿಯಲ್ಲಿ ನಿಜ ಜೀವನದಲ್ಲೂ ದಂಪತಿಗಳಾಗಿರುವ ಗುರ್ಮಿತ್ ಚೌಧರಿ ಮತ್ತು ದೇಬೀನಾ ಬ್ಯಾನರ್ಜಿ ಜೋಡಿ ರಾಮ, ಸೀತೆಯಾಗಿ ಕಾಣಿಸಿಕೊಂಡಿದ್ದರು.
Advertisement