
ವಾಷಿಂಗ್ಟನ್: ರಾನ್ ಸಮ್ ಸೈಬರ್ ದಾಳಿಗೆ ವಿಶ್ವಾದ್ಯಂತ 150ಕ್ಕೂ ಹೆಚ್ಚು ರಾಷ್ಟ್ರಗಳ 2 ಲಕ್ಷಕ್ಕೂ ಅಧಿಕ ಕಂಪ್ಯೂಟರ್ ಗಳು ತುತ್ತಾಗಿರುವ ಬೆನ್ನಲ್ಲೇ ಹ್ಯಾಕರ್ ಗಳು ಹಾಲಿವುಡ್ ದುಬಾರಿ ಸಿನಿಮಾವೊಂದನ್ನು ಕೂಡ ಕದ್ದು, ತಾವು ಕೇಳಿದಷ್ಟು ಹಣ ಕೊಡದಿದ್ದರೆ ಸಂಪೂರ್ಣ ಚಿತ್ರವನ್ನು ಬಿಡುಗಡೆಗೆ ಮುನ್ನವೇ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಮೂಲಗಳ ಪ್ರಕಾರ ಹಾಲಿವುಡ್ ನ ದುಬಾರಿ ಸಿನಿಮಾ ಪೈರೇಟ್ಸ್ ಆಫ್ ದಿ ಕೆರಿಬಿಯನ್-5 ಚಿತ್ರವನ್ನು ಹ್ಯಾಕರ್ ಗಳು ಕದ್ದಿರುವುದಾಗಿ ಹೇಳಿಕೊಂಡಿದ್ದು, ತಾವು ಕೇಳಿದಷ್ಟು ಹಣ ಕೊಡದಿದ್ದರೇ ಕೂಡಲೇ ಸಂಪರ್ಣ ಚಿತ್ರವನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಖ್ಯಾತ ಹಾಲಿವುಡ್ ನಟ ಜಾನಿ ಡೆಪ್ ಅಭಿನಯಿಸಿರುವ, ಜೋಕಿಮ್ ರೋನಿಂಗ್ ಮತ್ತು ಎಸ್ಸೆನ್ ಸ್ಯಾಂಡ್ಬರ್ಗ್ ನಿರ್ದೇಶಿಸಿರುವ "ಪೈರೇಟ್ಸ್ ಆಫ್ ದಿ ಕೆರಿಬಿಯನ್-5" ಚಿತ್ರವನ್ನು ಪ್ರಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ವಾಲ್ಟ್ ಡಿಸ್ನಿ ಸುಮಾರು 2 ಸಾವಿರ ಕೋಟಿ ರು. ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಿದೆ.
ಚಿತ್ರ ಇದೇ ಮೇ 24ರಂದು ವಿಶ್ವಾದ್ಯಂತ ತೆರೆ ಕಾಣುತ್ತಿದ್ದು, ಬಿಡುಗಡೆಗೆ ಇನ್ನು ಕೇವಲ 9 ದಿನಗಳಿರುವಂತೆ ಹ್ಯಾಕರ್ ಗಳು ಚಿತ್ರವನ್ನು ಕದ್ದು, ಆನ್ ಲೈನ್ ನಲ್ಲಿ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಡಿಸ್ನಿ ಸ್ಟುಡಿಯೋ ಸಿಇಓ ಬಾಬ್ ಇಗರ್ ಅವರು, ಹ್ಯಾಕರ್ ಗಳು ಸಿನಿಮಾವನ್ನು ಕದ್ದಿರುವುದಾಗಿಯೂ ಮತ್ತು ತಾವು ಕೇಳಿದಷ್ಚು ಹಣ ಕೊಡದಿದ್ದರೆ ಚಿತ್ರವನ್ನು ಆನ್ ಲೈನ್ ನಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ನಾವು ಈ ವರೆಗೂ ಹಣ ಕೊಡಲು ಒಪ್ಪಿಕೊಂಡಿಲ್ಲ. ಈ ಬಗ್ಗೆ ಎಫ್ ಬಿಐ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದೇವೆ, ಅವರು ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ ಉತ್ತಮ ಫಲಿತಾಂಶ ದೊರೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಈ ಹಿಂದೆ ತೆರೆಕಂಡಿದ್ದು ಪೈರೇಟ್ಸ್ ಅಫ್ ದಿ ಕೆರಿಬಿಯನ್ ಚಿತ್ರದ ಮೊದಲ ನಾಲ್ಕು ಸರಣಿಗಳು ಯಶಸ್ವಿಯಾಗಿದ್ದವು. ಇದರ ಯಶಸ್ಸಿನ ಬೆನ್ನಲ್ಲೇ 5 ಸರಣಿಯನ್ನು ನಿರ್ಮಾಪಕರು ಅದ್ಧೂರಿಯಾಗಿ ತೆರೆಗೆ ತರಲು ನಿರ್ಧರಿಸಿದ್ದರು. ಇದೇ ಕಾರಣಕ್ಕೆ ಬರೊಬ್ಬರಿ 2 ಸಾವಿರ ಕೋಟಿ ವೆಚ್ಚ ಮಾಡಿ ಚಿತ್ರ ನಿರ್ಮಿಸಿದ್ದರು. ಇದೀಗ ಈ ಚಿತ್ರವನ್ನು ಹ್ಯಾಕರ್ ಗಳು ಕದ್ದಿರುವುದು ನಿರ್ಮಾಪಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
Advertisement