ಹೈದರಾಬಾದ್: ಮೆಗಾಸ್ಟಾರ್ ಚಿರಂಜೀವಿ ಅವರ ಹೈದರಾಬಾದ್ ನ ಜುಬ್ಲಿಹಿಲ್ಸ್ ನಲ್ಲಿರುವ ನಿವಾಸದಲ್ಲಿ 2 ಲಕ್ಷ ರುಪಾಯಿ ಕಳ್ಳತನವಾಗಿದೆ.
ಚಿರಂಜೀವಿ ಅವರ ನಿವಾಸದಲ್ಲಿ 2 ಲಕ್ಷ ರುಪಾಯಿ ಕಳ್ಳತನವಾಗಿದ್ದು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಚಿರಂಜೀವಿ ಸಹಾಯಕ ದೂರು ದಾಖಲಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಪ್ರಕರಣ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸರು ಚಿರಂಜೀವಿ ನಿವಾಸದಲ್ಲಿ ಕೆಲಸ ಮಾಡುತ್ತಿರುವ ಚಿನ್ನಯ್ಯ ಎಂಬುವರನ್ನು ಶಂಕೆ ಮೇರೆಗೆ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಚಿರಂಜೀವಿ ಅವರು ತಮ್ಮ 151ನೇ ಚಿತ್ರ ಸೈರಾ ನರಸಿಂಹಾ ರೆಡ್ಡಿ ಚಿತ್ರದಲ್ಲಿ ಬ್ಯುಸಿಯಾಗಿದ್ದು ಈ ಚಿತ್ರವನ್ನು ರಾಮ್ ಚರಣ್ ತೇಜಾ ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಸುರೇಂದ್ರ ರೆಡ್ಡಿ ನಿರ್ದೇಶಿಸುತ್ತಿದ್ದಾರೆ.
ಸ್ವತಂತ್ರ ಹೋರಾಟಗಾರ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಜೀವನಾಧಾರಿತ ಚಿತ್ರವಾಗಿದ್ದು ಚಿತ್ರದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ನಯನತಾರಾ, ವಿಜಯ್ ಸೇತುಪತಿ, ಜಗಪತಿ ಬಾಬು ಮತ್ತು ಸುದೀಪ್ ನಟಿಸುತ್ತಿದ್ದಾರೆ.