ವೈಭವೋಪೇತವಾಗಿ ಆರಂಭಗೊಂಡ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಮುಂಭಾಗದಲ್ಲಿ 10ನೇ ಬೆಂಗಳೂರು ಅಂತಾರಾಷ್ಟ್ರೀಯ....
10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದ ವಾರ್ತಾ ಸಚಿವ ರೋಷನ್ ಬೇಗ್, ನಿರ್ದೇಶಕ ಓಂ ಪ್ರಕಾಶ್ ಮೆಹ್ರಾ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್
10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದ ವಾರ್ತಾ ಸಚಿವ ರೋಷನ್ ಬೇಗ್, ನಿರ್ದೇಶಕ ಓಂ ಪ್ರಕಾಶ್ ಮೆಹ್ರಾ, ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್

ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಮುಂಭಾಗದಲ್ಲಿ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ವೈಭವೋಪೇತವಾಗಿ ಚಾಲನೆಗೊಂಡಿತು. ರಾತ್ರಿಯ ಝಗಮಗಿಸುವ ದೀಪಗಳ ಅಲಂಕಾರದಲ್ಲಿ ವರ್ಣರಂಜಿತ ಉಡುಪುಗಳೊಂದಿಗೆ ಕಲಾವಿದರು ಜಾನಪದ ನೃತ್ಯಕ್ಕೆ ಹೆಜ್ಜೆ ಹಾಕಿದರು. ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮತ್ತು ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಕಾರ್ಯಕ್ರಮಕ್ಕೆ ವಿಶೇಷ ರಂಗು ತಂದುಕೊಟ್ಟರು.

ಕನ್ನಡ ಸಿನಿಮಾಗಳಿಗೆ ಕೆಲವು ಪ್ರೋತ್ಸಾಹಕಗಳನ್ನು ಇದೇ ಸಂದರ್ಭದಲ್ಲಿ ಘೋಷಿಸಲಾಯಿತು. ಚಲನಚಿತ್ರೋತ್ಸವ ಉದ್ಘಾಟನೆಯ ಆಹ್ವಾನ ಪತ್ರಿಕೆಯಲ್ಲಿ ಹೆಸರಿಸಿದ್ದ ಅನೇಕ ಕನ್ನಡ ಸಿನಿಮಾ ನಟ-ನಟಿಯರು ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು.
ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಜಯಮಾಲಾ, ಅಂಬರೀಷ್ ಮತ್ತು ಉಮಾಶ್ರೀ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಕಾರ್ಯಕ್ರಮದ ನಿರೂಪಕಿಯರಾದ ಸುಹಾಸಿನಿ ಮತ್ತು ಶೃತಿ ಹರಿಹರನ್ ಕೂಡ ಆಗಮಿಸಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಕಾರ್ಯಕ್ರಮದಲ್ಲಿ ಮಾತನಾಡಿದ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್, ತಮ್ಮ ಅಜ್ಜ ರಾಜ್ ಕಪೂರ್ ಗೆ ಕನ್ನಡ ಸಿನಿಮಾ ಮತ್ತು ಮೈಸೂರು ನಗರದ ಮೇಲೆ ಅಪಾರವಾದ ಪ್ರೀತಿ ಇತ್ತು. ಕಪೂರ್ ಕುಟುಂಬಕ್ಕೆ ಬೆಂಗಳೂರು ನಗರ ಯಾವತ್ತಿಗೂ ವಿಶೇಷವೇ. ತಮ್ಮ ತಾತನ ಕೆಲಸದ ಮೇಲಿನ ಉತ್ಸಾಹ ಇಂದು ನನ್ನನ್ನು ಕೂಡ ಬೆಂಗಳೂರಿನ ಸಿನಿಮೋತ್ಸವಕ್ಕೆ ಕರೆದುಕೊಂಡು ಬಂದಿದೆ. ನಿರ್ದೇಶಕರು, ನಿರ್ಮಾಪಕರು ಮತ್ತು ನಟರಿಂದ ಇನ್ನಷ್ಟು ಉತ್ತಮ ಸಿನಿಮಾಗಳು ಬರಲಿ ಎಂದು ಆಶಿಸಿದರು.

ತಮಗೆ ಕನ್ನಡ ಭಾಷೆ ಬಾರದಿದ್ದರೂ ಕೂಡ ಇನ್ನು ಮುಂದೆ ಯಾವತ್ತಾದರೂ ಕನ್ನಡ ಭಾಷೆಯಲ್ಲಿ ಇಲ್ಲಿನ ಜನರನ್ನು ಮನರಂಜಿಸುವ ಆಶಾವಾದವಿದೆ ಎಂದು ಕರೀನಾ ಕಪೂರ್ ಹೇಳಿದರು.

ರಾಕೇಶ್ ಓಂಪ್ರಕಾಶ್ ಮಾತನಾಡಿ, ನನ್ನ ಪತ್ನಿ ಈ ನಗರದವರಾಗಿರುವುದರಿಂದ ನಾನು ಬೆಂಗಳೂರಿನ ಅಳಿಯ ಎಂದು ಸಂತೋಷದಿಂದ ಹೇಳಿಕೊಂಡರು. ನಿರ್ದೇಶಕ ಮಣಿ ರತ್ನಮ್ ಅವರಿಗೆ ಜೀವಾವಧಿ ಸಾಧನೆ ಗೌರವ ಪ್ರಶಸ್ತಿ ಘೋಷಿಸಲಾಯಿತು.

ಕನ್ನಡ ಚಿತ್ರ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಕನ್ನಡ ಕಾದಂಬರಿ ಮೇಲೆ ಚಿತ್ರ ತಯಾರಿಸಿದವರಿಗೆ 25 ಲಕ್ಷ ರೂಪಾಯಿ ವಿಶೇಷ ಪ್ರೋತ್ಸಾಹ ನೀಡಲಾಗುವುದು.ಅಲ್ಲದೆ ಕಾದಂಬರಿ ಲೇಖಕರಿಗೆ 5 ಲಕ್ಷ ರೂಪಾಯಿ ನೀಡಲಾಗುವುದು. ಕರ್ನಾಟಕ ರಾಜ್ಯದಲ್ಲಿ ಸಿನಿಮಾಗಳ ಚಿತ್ರೀಕರಣ ಮಾಡಿದವರಿಗೆ ಸರ್ಕಾರ 5 ಕೋಟಿಯವರೆಗೆ ಧನಸಹಾಯ ನೀಡಲಿದೆ ಎಂದರು.

ಮಾರ್ಚ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಫಿಲ್ಮ್ ಸಿಟಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಲ್ಲದೆ ರಾಜ್ಯದ ಅಲ್ಲಲ್ಲಿ ಜಂತಾ ಥಿಯೇಟರ್ ಗಳನ್ನು ಸ್ಥಾಪಿಸಲಾಗುವುದು. ಸ್ಥಳೀಯ ಸಿನಿಮಾಗಳಿಗೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಇಷ್ಟೊಂದು ಪ್ರೋತ್ಸಾಹಕಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ರಾಜ್ಯ ಸರ್ಕಾರ, ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾರ್ಚ್ 1ರವರೆಗೆ ಆಯೋಜಿಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com