ಇದ್ದಾಗ ಅವರ ಬೆಲೆ ತಿಳಿಯಲಿಲ್ಲ, ತಿಳಿದಾಗ ಅವರೇ ಇಲ್ಲ': ಹರಿಕೃಷ್ಣ ನೆನೆದು ಕಣ್ಣೀರು ಹಾಕಿದ ಜೂ. ಎನ್ ಟಿಆರ್

ಇತ್ತೀಚೆಗಷ್ಟೇ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಟ ಹರಿಕೃಷ್ಣ ಅವರನ್ನು ನೆನೆದು ಅವರ ಪುತ್ರ ಜೂನಿಯರ್ ಎನ್ ಟಿಆರ್ ವೇದಿಕೆಯಲ್ಲೇ ಕಣ್ಣೀರು ಹಾಕಿದ್ದಾರೆ.
ವೇದಿಕೆಯಲ್ಲೇ ಕಣ್ಣೀರು ಹಾಕಿದ ಜೂ.ಎನ್ ಟಿಆರ್
ವೇದಿಕೆಯಲ್ಲೇ ಕಣ್ಣೀರು ಹಾಕಿದ ಜೂ.ಎನ್ ಟಿಆರ್
ಹೈದರಾಬಾದ್: ಇತ್ತೀಚೆಗಷ್ಟೇ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಟ ಹರಿಕೃಷ್ಣ ಅವರನ್ನು ನೆನೆದು ಅವರ ಪುತ್ರ ಜೂನಿಯರ್ ಎನ್ ಟಿಆರ್ ವೇದಿಕೆಯಲ್ಲೇ ಕಣ್ಣೀರು ಹಾಕಿದ್ದಾರೆ.
ತಮ್ಮ ಅಭಿನಯದ 'ಅರವಿಂದ ಸಮೇತ ವೀರ ರಾಘವ' ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎನ್ ಟಿಆರ್,  'ಇದ್ದಾಗ ಅವರ ಬೆಲೆ ತಿಳಿಯಲಿಲ್ಲ, ತಿಳಿದಾಗ ಅವರೇ ಇಲ್ಲ ಎಂದು ಅವರ ತಂದೆಯನ್ನು ನೆನೆದು ಭಾವುಕರಾದರು. 
'ನಾನು 27 ಸಿನಿಮಾಗಳನ್ನ ಮಾಡಿದ್ದೇನೆ. ಆದರೆ, ಯಾವ ಸಿನಿಮಾದಲ್ಲು ತಂದೆ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ದೃಶ್ಯ ಇಲ್ಲ. ಆದರೆ, ಈ ಸಿನಿಮಾದಲ್ಲಿ ಅಂತಹ ದೃಶ್ಯ ಇದೆ. ಆದರೆ ವಿಪರ್ಯಾಸವೆಂದರೆ ಆ ಚಿತ್ರದ ಚಿತ್ರೀಕರಣ ಪೂರ್ಣಗೊಂಡ ಬೆನ್ನಲ್ಲೇ ನಮ್ಮ ತಂದೆ ಅಪಘಾತದಲ್ಲಿ ಸಾವನ್ನಪ್ಪಿ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಬೇಕಾಯಿತು ಎಂದು  ಎನ್​ಟಿಆರ್ ಅವರು ಕಣ್ಣೀರಿಟ್ಟು ತಮ್ಮ ತಂದೆಯನ್ನು ನೆನೆದರು.
'ಯಾರಾದರು ಹೋದ ಮೇಲೆನೇ ಅವರ ಬೆಲೆ ಗೊತ್ತಾಗುವುದು. ನಾನು ಇದ್ದಾಗ ಅವರನ್ನು ಮಾತನಾಡಿಸುತ್ತಿರಲಿಲ್ಲ. ಹೋದ ಮೇಲೆ ಅವರ ಬೆಲೆ ಏನೆಂದು ಗೊತ್ತಾಗಿದೆ. ತಂದೆ ಯಾವಾಗಲು ಹೇಳುತ್ತಿದ್ದರು ಅಭಿಮಾನಿಗಳು ಕಡೆ ಜಾಗೃತೆವಹಿಸಿ, ನಾವು ಅವರಿಗೆ ಏನು ಮಾಡದೆ ಹೋದರೂ, ಅವರು ನಮಗಾಗಿ ಎಲ್ಲವನ್ನು ಮಾಡುತ್ತಾರೆ. ಹೀಗಾಗಿ ಅವರನ್ನು ಜಾಗೃತೆಯಿಂದ ನೋಡಿಕೊಳ್ಳಿ ಎಂದು ಹೇಳುತ್ತಲೇ ಇದ್ದರು.  ಆದರೆ ಇದೊಂದು ಚಿತ್ರವನ್ನು ನೋಡುವುದಕ್ಕಾದರೂ ಅವರು ನಮ್ಮೊಂದಿಗೆ ಇರಬೇಕಿತ್ತು. ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲದೇ ಹೋದರೂ ಅಭಿಮಾನಿಗಳಲ್ಲಿ ನಾನು ಅವರನ್ನು ನೋಡುತ್ತಿದ್ದೇನೆ. ನಮ್ಮ ಜೀವನ ನಿಮಗೆ ಅಂಕಿತ ಎಂದು ಹೇಳಿ ಎನ್​ಟಿಆರ್​ ಭಾವುಕರಾದರು.
ಬಳಿಕ ಮಾತು ಮುಗಿಸಿ ಹೊರಟಿದ್ದ ಎನ್​ಟಿಆರ್ ಮತ್ತೆ ವೇದಿಕೆಗೆ ವಾಪಸ್ ಬಂದು ಮೈಕ್ ಹಿಡಿದು, ನನ್ನ ತಂದೆಗೆ ನಾನು ಹೇಳುವುದಕ್ಕೆ ಆಗಲಿಲ್ಲ. ನಿಮಗೆ ಹೇಳುತ್ತಿದ್ದೇನೆ. ಜಾಗೃತೆಯಿಂದ ಮನೆಗೆ ಹೋಗಿ. ನಮ್ಮ‌ಕುಟುಂಬದಲ್ಲಿ ಆಗಿರುವ ನೋವು ಮತ್ತಿನ್ಯಾವ ಕುಟುಂಬಕ್ಕೂ ಆಗಬಾರದು. ನಿಮ್ಮ ಕುಟುಂಬ ನಿಮಗಾಗಿ ಎದುರು ನೋಡುತ್ತಿರುತ್ತದೆ. ಹುಷಾರಾಗಿ ಹೋಗಿ. ಏಕೆಂದರೆ ನೀವು ನಡು ರಸ್ತೆಯಲ್ಲಿ ನಿಂತಾಗ ಮೊದಲು ಬರುವುದು ನಿಮ್ಮ ಕುಟುಂಬ ಆನಂತರ ನಾವು ಎಂದು‌ ಹೇಳಿ‌ ಕಣ್ಣೀರಾಕುತ್ತಾ ಹೊರಟರು.
ಜ್ಯೂನಿಯರ್ ಎನ್​ಟಿಆರ್​ ಅವರ ತಂದೆ ನಂದಮೂರಿ ಹರಿಕೃಷ್ಣ ಅವರು ಕಳೆದ ಆಗಸ್ಟ್​ 29 ರಂದು ರಸ್ತೆ ಅಪಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com