ಮಧ್ಯರಾತ್ರಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ, ನಟ ದುನಿಯಾ ವಿಜಿ ಬಂಧನ

ಸ್ಯಾಂಡಲ್ ವುಡ್ ನಟ ದುನಿಯಾ ವಿಜಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದು, ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.
ಹೈಗ್ರೌಂಡ್ಸ್ ಠಾಣೆ ಎದುರು ವಿಜಿ-ಪಾನಿಪುರಿ ಕಿಟ್ಟಿ ಹೈಡ್ರಾಮಾ
ಹೈಗ್ರೌಂಡ್ಸ್ ಠಾಣೆ ಎದುರು ವಿಜಿ-ಪಾನಿಪುರಿ ಕಿಟ್ಟಿ ಹೈಡ್ರಾಮಾ
Updated on
ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದು, ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.
ಖ್ಯಾತ ಜಿಮ್ ಟ್ರೈನರ್ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ  ಅವರನ್ನು ಅಪಹರಿಸಿ, ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೈಗ್ರೌಂಡ್ ಪೊಲೀಸರು ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣದಡಿ ನಟ ದುನಿಯಾ ವಿಜಯ್ ಅವರನ್ನು ಬಂಧಿಸಿದ್ದಾರೆ.  ಖುದ್ಧು ಪಾನಿಪೂರಿ ಕಿಟ್ಟಿ ಮತ್ತು ಅವರ ಅಣ್ಣನ ಮಗ ಮಾರುತಿಗೌಡ ಶನಿವಾರ ರಾತ್ರಿ ಸುಮಾರು 11.30ಕ್ಕೆ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ನಡೆದಿದ್ದೇನು?
ಶನಿವಾರ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಮಿಸ್ಟರ್ ಬೆಂಗಳೂರು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯುತಿತ್ತು. ಈ ಕಾಂಪಿಟೇಷನ್ ನೋಡಲು ದುನಿಯಾ ವಿಜಿ ಮತ್ತು ತಂಡ ಬಂದಿತ್ತು. ಈ ವೇಳೆ ಪಾನಿಪೂರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮತ್ತು ದುನಿಯಾ ವಿಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಗಲಾಟೆ ವಿಕೋಪಕ್ಕೆ ತಿರುಗಿ ದುನಿಯಾ ವಿಜಯ್ ಗ್ಯಾಂಗ್, ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಕಾರಿನಲ್ಲಿ ಹಾಕಿಕೊಂಡು ಕಿಡ್ನಾಪ್ ಮಾಡಿದ್ದಾರೆ. ದುನಿಯಾ ವಿಜಿ, ಮಣಿ ಮತ್ತು ಪ್ರಸಾದ್ ಸಹಚರರಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಮಾರುತಿಗೌಡ ಸಹಚರರಿಂದ ದೂರು ಪಡೆದ ಹೈಗ್ರೌಂಡ್ಸ್ ಪೊಲೀಸರು ಮೊದಲಿಗೆ ದುನಿಯಾ ವಿಜಯ್‍ಗೆ ಕರೆ ಮಾಡಿ ಎಚ್ಚರಿಸಿದ್ದಾರೆ. 30 ನಿಮಿಷದ ನಂತರ ಕಿಡ್ನಾಪ್ ಮಾಡಿದ್ದ ಮಾರುತಿಗೌಡನೊಂದಿಗೆ ದುನಿಯಾ ವಿಜಯ್ ಹೈಗ್ರೌಂಡ್ ಪೊಲೀಸ್ ಠಾಣೆ ಬಳಿ ತನ್ನ ರೇಂಜ್ ರೋವರ್ ಕಾರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಜೊತೆಗೆ ಹಲ್ಲೆ ಮಾಡಿದ್ದ ಜಿಮ್ ಟ್ರೇನರ್ ಮಾರುತಿಗೌಡ ಅವರನ್ನು ಕರೆದುಕೊಂಡು ಬಂದಿದ್ದರು. ಆದರೆ ದುನಿಯಾ ವಿಜಯ್ ಪೋಲೀಸ್ ಠಾಣೆಯೂ ಬಳಿಯೂ ದರ್ಪ ತೋರಿದ್ದು, ಅವಾಚ್ಯ ಶಬ್ಧಗಳಿಂದ ಮತ್ತೆ ಪಾನಿಪುರಿ ಕಿಟ್ಟಿ ಹಾಗೂ ಹುಡುಗರನ್ನ ಬೈದಿದ್ದಾರೆ ಎನ್ನಲಾಗಿದೆ.
ಈ ವೇಳೆ ಪಾನಿಪುರಿ ಕಿಟ್ಟಿ ಹುಡುಗರು, ದುನಿಯ್ ವಿಜಿ ಕಾರ್ ನ ಮೇಲೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದರು. ಹೈಗ್ರೌಂಡ್ಸ್ ಪೊಲೀಸ್ ಠಾಣೆ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಒಂದು ಹಂತದಲ್ಲಿ ಪಾನಿಪುರಿ ಕಿಟ್ಟಿ ಮತ್ತು ನಟ ವಿಜಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಕ್ಯಾಮೆರಾಗಳ ಮುಂದೆಯೇ ನಡೆದ ಈ ಹೈಡ್ರಾಮಾ ಪೊಲೀಸರ ಮಧ್ಯ ಪ್ರವೇಶದಿಂದಾಗಿ ತಿಳಿಯಾಗಿತ್ತು. ಕೂಡಲೇ ಪೊಲೀಸರು ನಟ ವಿಜಿಯನ್ನು ಬಂಧಿಸಿದರು. ಅಂತೆಯೇ  ಪರಿಸ್ಥಿತಿ ನಿಯಂತ್ರಿಸಲು ಕೆಎಸ್‍ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿತ್ತು. ಪೊಲೀಸ್ ಠಾಣೆ ಬಳಿಯೂ ದರ್ಪ ಮೆರೆಯುತ್ತಿದ್ದ ವಿಜಿಗೆ ಎಸಿಪಿ ರವಿಶಂಕರ್ ಖಡಕ್ ವಾರ್ನಿಂಗ್ ಮಾಡಿದ್ದಾರೆ. 
ಈ ಕುರಿತು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ದುನಿಯ್ ವಿಜಯ್ ಹಾಗೂ ಸಹಚರರನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 365, 342, 325, 506ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೈಗ್ರೌಂಡ್ ಪೊಲೀಸರು ದುನಿಯ್ ವಿಜಯ್ ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಹಿಂದೆ ದುನಿಯಾ ವಿಜಯ್ ಗೆ ಪಾನಿಪೂರಿ ಕಿಟ್ಟಿ ಜಿಮ್ ಟ್ರೇನರ್ ಆಗಿದ್ದರು. ಆದರೆ ಇತ್ತೀಚೆಗೆ ಈ ಎರಡೂ ಗ್ಯಾಂಗ್ ಗಳ ಮಧ್ಯೆ ವೈಮನಸ್ಸು ಮೂಡಿತ್ತು. ಹೀಗಾಗಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಪಾನಿಪುರ ಕಿಟ್ಟಿಯ ಮೇಲಿನ ದ್ವೇಷಕ್ಕೆ ಆತನ ಅಣ್ಣನ ಮಗ ಮಾರುತಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆಗೊಳಗಾದ ಮಾರುತಿಗೌಡ ಈಗ ನಟರಾದ ಯಶ್, ಅಜಯ್ ರಾವ್, ಪ್ರೇಮ್ ಗೂ ಜಿಮ್ ಟ್ರೇನರ್ ಆಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com