ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಟ ದುನಿಯಾ ವಿಜಯ್ ವಿರುದ್ಧ ಪೊಲೀಸರಿಂದ ರೌಡಿ ಶೀಟರ್?

ಜಿಮ್ ಟ್ರೈನರ್ ಮಾರುತಿಗೌಡ ಅವರ ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ನಟ ದುನಿಯಾ ವಿಜಯ್ ವಿರುದ್ಧ ರೌಡಿ ಶೀಟ್ ತೆರೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
Published on
ಬೆಂಗಳೂರು: ಜಿಮ್ ಟ್ರೈನರ್ ಮಾರುತಿಗೌಡ ಅವರ ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ನಟ ದುನಿಯಾ ವಿಜಯ್ ವಿರುದ್ಧ ರೌಡಿ ಶೀಟರ್ ತೆರೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಜಿಮ್​ ತರಬೇತುದಾರ ಮಾರುತಿಗೌಡ ಎಂಬುವವರ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ಸ್​ ಠಾಣೆಯಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಪೊಲೀಸ್​ ಠಾಣೆ ಎದುರು ಜನರು ಸೇರುವ ಸಾಧ್ಯತೆ ಇರುವುದರಿಂದ ಯಾರಿಗೂ ತಿಳಿಯದಂತೆ ಹಿಂಬಾಗಿಲ ಮೂಲಕ ವಿಜಯ್​ ಅವರನ್ನು ಅನ್ಯ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ನಟ ವಿಜಯ್​ ಹಾಗೂ ಸಹಚರರಿಗೆ ನ್ಯಾಯಾಂಗ ಬಂಧನದ ಸಾಧ್ಯತೆಯೂ ಹೆಚ್ಚಾಗಿದ್ದು, ಇಂದು ಕೋರ್ಟ್​ಗೆ ರಜೆ ಇರುವುದರಿಂದ ಜಾಮೀನು ಅರ್ಜಿ ಸಾಧ್ಯವಿಲ್ಲದ ಕಾರಣ ಪೊಲೀಸರ ವಶದಲ್ಲೆ ಇರಬೇಕಾಗಿದೆ. 
ರೌಡಿ ಶೀಟರ್​ ಓಪನ್​?
ಇನ್ನು ಪದೇ ಪದೇ ಒಂದಿಲ್ಲೊಂದು ಕಾನೂನು ಬಾಹಿರ ಕೃತ್ಯ ನಡೆಸುತ್ತಿರುವ ನಟ ದುನಿಯಾ ವಿಜಯ್​ ಮೇಲೆ ರೌಡಿ ಶೀಟರ್​ ತೆರೆಯಲು​ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹೊಡೆದಾಟ, ಗಲಾಟೆ, ಬೆದರಿಕೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮಾಜಿ ಯೋಧರ ಮೇಲೆ ಹಲ್ಲೆ, ಆರೋಪಿ ತಪ್ಪಿಸಿಕೊಳ್ಳಲು ನೆರವು ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ವಿಜಯ್​ ವಿರುದ್ಧ ರೌಡಿ ಶೀಟರ್​ ಓಪನ್​ ಮಾಡುವುದಕ್ಕೆ ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ವಿಜಿ ಹಲ್ಲೆ ಮತ್ತು ಬೆದರಿಕೆ ಹಾಕಿರುವ ಪ್ರಕರಣಗಳು ಇದೇ ಮೊದಲೇನಲ್ಲ. ಈ ಹಿಂದೆ ಮಾಸ್ತಿಗುಡಿ ಚಿತ್ರೀಕರಣ ವೇಳೆ ನಟರಿಬ್ಬರ ಸಾವಿಗೆ ಸಂಬಂಧಿಸಿದಂತೆ ನಿರ್ದೇಶಕ ಪಿ.ಸುಂದರ್​ ಬಂಧನಕ್ಕೆ ಆಗಮಿಸಿದ್ದ ಪೊಲೀಸರ ಕಣ್ಣುತಪ್ಪಿಸಿ ಆರೋಪಿ ಪರಾರಿಯಾಗಲು ಸಹಾಯ ಮಾಡಿದ್ದರು. ಈ ಸಂಬಂಧ ತಾವರೆಕೆರೆ ಠಾಣೆಯ ಮುಖ್ಯಪೇದೆ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಅಂತೆಯೇ ನಿರ್ಮಾಪಕ ಸುಂದರಗೌಡ ಅಣ್ಣ ಮತ್ತು ಪತ್ನಿಯ ನಡುವಿನ ಗಲಾಟೆ ವೇಳೆ ಸುಂದರಗೌಡ ಅಣ್ಣನ ಪತ್ನಿಯ ತವರು ಮನೆಯವರಿಗೆ ವಿಜಿ ಬೆದರಿಕೆ ಹಾಕಿದ್ದರು. ಇದಾದ ಬಳಿಕ ಕೆಲ ಚಿತ್ರಮಂದಿರಗಳ ಮಾಲೀಕರಿಗೆ ಬೆದರಿಕೆ ಹಾಕಿದ್ದರ ಸಂಬಂಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇಷ್ಟು ಮಾತ್ರವಲ್ಲದೇ ಹಲವು ಹೊಡೆದಾಟ, ಗಲಾಟೆಯಲ್ಲಿ ಭಾಗಿಯಾದ ಆರೋಪಗಳನ್ನು ವಿಜಿ ಎದುರಿಸುತ್ತಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com