ಸಿನಿಮಾ ಸುದ್ದಿ
ಒಂದು ಮಾಧ್ಯಮದಿಂದ ಟಾರ್ಗೆಟ್, ರಾಕಿಂಗ್ ಸ್ಟಾರ್ ಯಶ್ ಗರಂ!
ಒಂದು ಮಾಧ್ಯಮದಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ರಾಕಿಂಗ್ ಸ್ಟಾರ್ ಯಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಒಂದು ಮಾಧ್ಯಮದಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ರಾಕಿಂಗ್ ಸ್ಟಾರ್ ಯಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಚಾರಣೆಗಾಗಿ ಆದಾಯ ತೆರಿಗೆ ಕಚೇರಿಗೆ ಇಂದು ತಾಯಿ ಪುಷ್ಪಾ ಜೊತೆ ಆಗಮಿಸಿದ ಯಶ್, ವಿಚಾರಣೆ ನಂತರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗರಂ ಆಗಿಯೇ ಉತ್ತರಿಸಿದರು.
ಯಶ್ ಗೆ 40 ಕೋಟಿ ಸಾಲ ಇದೆ, ಯಶ್ ಆಡಿಟರ್ ಮನೆ ಮೇಲೆ ದಾಳಿ ನಡೆಸಿದ್ದಾರೆ ಅಂತಾ ಒಂದು ಮಾಧ್ಯಮ ಸುಳ್ಳು ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದೆ. ಇಂತಹ ವದಂತಿ ಯಾಕೆ ಹರಡುತ್ತೀರಿ ಎಂದು ಪ್ರಶ್ನಿಸಿದರು. ನಮ್ಮ ಮನೆಯಲ್ಲಿ ಎಷ್ಟು ಕೋಟಿ ಸಿಕ್ಕಿದೆ ಅಂತ ಅಧಿಕಾರಿಗಳು ಹೇಳಿದ್ದಾರಾ? ಎಂದು ಖಾರವಾಗಿ ಯಶ್ ಪ್ರತಿಕ್ರಿಯಿಸಿದರು.
ನಮ್ಮ ಮನೆಯಲ್ಲಿ ಏನು ಸಿಕ್ಕಿದೆ ಎಂಬುದು ಅಧಿಕಾರಿಗಳಿಗೆ ಗೊತ್ತು. ನನಗೆ 15ರಿಂದ 16 ಕೋಟಿ ರೂ. ಸಾಲ ಇದೆ. ಅಷ್ಟು ಸಾಲ ಕೊಡಬೇಕಾದ್ರೆ ನಾನು ಆದಾಯ ತೆರಿಗೆ ಕಟ್ಟದೆ ಸಾಲ ಕೊಡುತ್ತಾರಾ? ಇದು ಸಾಮಾನ್ಯ ಜ್ಞಾನ. ಆದರೆ ತೇಜೋವಧೆ ಮಾಡ್ಕಂಡಿದ್ರೆ ನಾವು ನೋಡ್ಕಂಡು ಸುಮ್ಮನಿರಲ್ಲ. ನನಗೆ ಯಾರ ಮೇಲೂ ವೈಯಕ್ತಿಕವಾಗಿ ಏನೂ ದ್ವೇಷ ಇಲ್ಲ, ಪತ್ರಕರ್ತರು ಅದನ್ನು ಇಟ್ಕೊಳ್ಳಬೇಡಿ ಎಂದರು.
ಸಮಾಜದ ಕಣ್ತಪ್ಪಿಸಿ ನನಗೆ ಏನೂ ಮಾಡಲು ಸಾಧ್ಯವಿಲ್ಲ. ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಆದರೆ ಊಹಾಪೋಹಗಳಿಗೆಲ್ಲಾ ಉತ್ತರಿಸಲ್ಲ ಎಂದು ಖಡಕ್ ಆಗಿಯೇ ಹೇಳಿದರು.
ನಮ್ಮ ಆಡಿಟರ್ ಕಚೇರಿಗೆ ತೆರಳಿದ್ದ ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರಂತೆ. ಇದು ಸದ್ಯಕ್ಕೆ ಮುಗಿಯೋ ವಿಚಾರಣೆಯಲ್ಲ, ಇನ್ನೂ ಎರಡು ವರ್ಷಗಳ ಕಾಲ ಮುಂದುವರಿಯಬಹುದು. ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ ಎಂದು ಯಶ್ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ