
ಬೆಂಗಳೂರು: ಚಿತ್ರದ ಆಡಿಷನ್ ಇದೆ ಎಂದು ಕರೆಯಿಸಿ ತಮ್ಮ ಮಗಳ ಮೇಲೆ ನೃತ್ಯ ಸಂಯೋಜಕನೊಬ್ಬ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನೃತ್ಯ ಸಂಯೋಜಕ ಪವನ್ ಎಂಬುವವರ ವಿರುದ್ಧ ನಗರದ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ನೃತ್ಯ ಸಂಯೋಜಕ ಪವನ್ ಅವರ ಬಳಿ ಯುವತಿ ನೃತ್ಯ ಕಲಿಯುತ್ತಿದ್ದರಿಂದ ಇಬ್ಬರಿಗೂ ಪರಿಚಯವಿತ್ತು. ಹೀಗಾಗಿ ಇದೇ ತಿಂಗಳ 12ರಂದು ಚಿತ್ರವೊಂದರಲ್ಲಿ ತಂಗಿಯ ಪಾತ್ರಕ್ಕೆ ಆಡಿಷನ್ ಇದೆ ಎಂದು ಕರೆ ಮಾಡಿ ಪವನ್, ಯುವತಿಯನ್ನು ಕರೆಸಿಕೊಂಡಿದ್ದನು
ಆರೋಪಿ ಪವನ್ ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಡ್ಯಾನ್ಸ್ ಕ್ಲಾಸ್ ಹೊಂದಿದ್ದನು. ಇದೇ ಡ್ಯಾನ್ಸ್ ಕ್ಲಾಸ್‍ನಲ್ಲಿ ಕಳೆದ ಮೂರು ವರ್ಷಗಳಿಂದ ಸಂತ್ರಸ್ತ ಯುವತಿ ಡ್ಯಾನ್ಸ್ ಕಲಿಯುತ್ತಿದ್ದರು.
ಕಳೆದ ಜನವರಿ 12 ರಂದು ಯುವತಿಗೆ ಪವನ್ ಫೋನ್ ಮಾಡಿದ್ದನು. ಆಗ ಸ್ಟಾರ್ ನಟರೊಬ್ಬರ ಹೊಸ ಸಿನಿಮಾಗೆ ತಂಗಿ ಪಾತ್ರದ ಆಡಿಶನ್ ಇದೆ ಎಂದು ಹೇಳಿ ತನ್ನ ಡ್ಯಾನ್ಸ್ ಕ್ಲಾಸಿಗೆ ಯುವತಿಯನ್ನು ಕರೆಸಿಕೊಂಡಿದ್ದನು.
ಯುವತಿ ಬರುವ ಮೊದಲೇ ಆರೋಪಿ ಪವನ್ ತನ್ನ ಗೆಳೆಯನೊಬ್ಬನಿಗೆ ಫೋನ್ ಮಾಡಿ ನಿರ್ದೇಶಕನ ಸೋಗಿನಲ್ಲಿ ಯುವತಿಯ ಜೊತೆ ಮಾತನಾಡುವಂತೆ ಹೇಳಿದ್ದಾನೆ. ಅದರಂತೆಯೇ ಆತನ ಗೆಳೆಯ ನೀನು ಸ್ಟಾರ್ ನಟನ ಮುಂದಿನ ಸಿನಿಮಾಗೆ ತಂಗಿ ಪಾತ್ರಕ್ಕೆ ಆಯ್ಕೆಯಾಗಿದ್ದೀಯಾ ಎಂದು ನಂಬಿಸಿದ್ದಾನೆ.
ನಂತರ ಮತ್ತು ಬರುವ ಔಷಧಿಯನ್ನು ನೀರಿನಲ್ಲಿ ಬೆರೆಸಿ ಯುವತಿಗೆ ಕುಡಿಸಿದ್ದಾನೆ. ಈ ವೇಳೆ ಡ್ಯಾನ್ಸ್ ಕ್ಲಾಸ್‍ನಲ್ಲಿ ಯುವತಿಗೆ ಮೊಬೈಲ್‍ನಲ್ಲಿ ಅಶ್ಲೀಲ ವಿಡಿಯೋಗಳನ್ನ ತೋರಿಸಿದ್ದಾನೆ. ನೀರು ಕುಡಿದ ಬಳಿಕ ಯುವತಿ ಪ್ರಜ್ಞೆ ತಪ್ಪಿದ್ದಾಗ ಆರೋಪಿ ಪವನ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
Advertisement