70 ವರ್ಷ ಭಾರತದಲ್ಲಿ ಜೀವನ ನಡೆಸಿರುವುದು ನನ್ನ ಪೌರತ್ವಕ್ಕೆ ಸಾಕ್ಷ್ಯವಲ್ಲವೇ?: ನಸೀರುದ್ದಿನ್ ಶಾ

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ನನಗೇನು ಭಯವಿಲ್ಲ. ಆದರೆ, ಕೋಪವಿದೆ. ಇತರೆ ಭಾರತೀಯರಂತೆಯೇ ನಾನೂ ಕೂಡ ಜನ್ಮ ಪ್ರಮಾಣಪತ್ರವನ್ನು ನೀಡುವುದಿಲ್ಲ. ಭಾರತದಲ್ಲಿ 70 ವರ್ಷ ಜೀವನ ನಡೆಸಿರುವುದು ನನ್ನ ಪೌರತ್ವಕ್ಕೆ ಸಾಕ್ಷ್ಯವಲ್ಲವೇ ಎಂದು ನಟ ನಸೀರುದ್ದಿನ್ ಶಾ ಅವರು ಪ್ರಶ್ನಿಸಿದ್ದಾರೆ.
ನಟ ನಸೀರುದ್ದಿನ್ ಶಾ
ನಟ ನಸೀರುದ್ದಿನ್ ಶಾ
Updated on

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ನನಗೇನು ಭಯವಿಲ್ಲ. ಆದರೆ, ಕೋಪವಿದೆ. ಇತರೆ ಭಾರತೀಯರಂತೆಯೇ ನಾನೂ ಕೂಡ ಜನ್ಮ ಪ್ರಮಾಣಪತ್ರವನ್ನು ನೀಡುವುದಿಲ್ಲ. ಭಾರತದಲ್ಲಿ 70 ವರ್ಷ ಜೀವನ ನಡೆಸಿರುವುದು ನನ್ನ ಪೌರತ್ವಕ್ಕೆ ಸಾಕ್ಷ್ಯವಲ್ಲವೇ ಎಂದು ನಟ ನಸೀರುದ್ದಿನ್ ಶಾ ಅವರು ಪ್ರಶ್ನಿಸಿದ್ದಾರೆ. 

ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮುಸ್ಲಿಮನಾಗಿ ಅಲ್ಲ, ಒಬ್ಬ ಪ್ರಜೆಯಾಗಿ ಮಾತನಾಡುತ್ತಿದ್ದೇನೆ. ದೇಶಕ್ಕಾಗಿ ನಾನು ಸಾಮಾಜಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಕೊಡುಗೆಗಳನ್ನು  ನೀಡಿದ್ದೇನೆ. ನಮ್ಮ ಕುಟುಂಬ 5 ಪೀಳಿಗೆಗಳು ದೇಶದ ಮಣ್ಣಿನಲ್ಲಿ ಮಣ್ಣಾಗಿದ್ದಾರೆ. ನನ್ನ ಬಳಿ ಜನ್ಮ ಪ್ರಮಾಣಪತ್ರವಿಲ್ಲ. ಅದನ್ನು ನಾನು ನೀಡುವುದೂ ಇಲ್ಲ. ಇದರ ಅರ್ಥ ನಾವು ಹೊರಗಿನವರು ಎಂಬರ್ಥವೇ? ಮುಸ್ಲಿಮರು ಚಿಂತೆಗೀಡಾಗುವ ಅಗತ್ಯವಿಲ್ಲ. ಆ ಬಗ್ಗೆ ಯಾವುದೇ ಭರವಸೆಯ ಅಗತ್ಯವೂ ಇಲ್ಲ. ಪೌರತ್ವ ಕಾಯ್ದೆಯಿಂದ ನಾನು ಆತಂಕ್ಕೀಡಾಗಿಲ್ಲ. ಕಾಯ್ದೆ ಬಗ್ಗೆ ನನಗೆ ಕೋಪವಿದೆ ಎಂದು ಹೇಳಿದ್ದಾರೆ. 

70 ವರ್ಷಗಳ ಕಾಲ ದೇಶದಲ್ಲಿ ಜೀವನ ನಡೆಸಿರುವುದು ನಾನು ಭಾರತೀಯನೆಂದು ಸಾಬೀತುಪಡಿಸದಿದ್ದರೆ, ಬೇರೆ ಸಾಕ್ಷ್ಯಗಳೇನು ಮಾಡುತ್ತದೆ ಎಂಬುದು ನನಗೆ ತಿಳಿಯುತ್ತಿಲ್ಲ. ಕಾಯ್ದೆ ಕುರಿತು ನನಗೆ ಆತಂಕವಿಲ್ಲ. ಆದರೆ, ಇಂತಹ ಕಾಯ್ದೆಯನ್ನು ಜಾರಿಗೆ ತಂದಿದ್ದಕ್ಕೆ ನನಗೆ ಕೋಪವಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಕಾಯ್ದೆ ಕುರಿತ ದೇಶದಾದ್ಯಂತ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಇದೀಗ ಯುವಕರು ದನಿ ಎತ್ತಿದ್ದಾರೆ. ತಮ್ಮ ಮೇಲಾಗುತ್ತಿರುವ ದಾಳಿಯನ್ನು ಮನವರಿಕೆ ಮಾಡಿಕೊಂಡಿದ್ದಾರೆ. ಪೌರತ್ವ ಕಾಯ್ದೆ ಮುಸ್ಲಿಂ ಸಮುದಾಯವನ್ನು ಗುರಿ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಮುಸ್ಲಿಮರು ಎಂದಿಗೂ ತಾವೊಬ್ಬರು ಎಂದು ಚಿಂತನೆ ನಡೆಸುವುದಿಲ್ಲ. ಇದನ್ನು ನಾನೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಹೇಳುತ್ತಿಲ್ಲ. ವಿದ್ಯಾರ್ಥಿಗಳ ಮೇಲೆ ದೇಶದ್ರೋಹ ಪ್ರಕರಣಗಳು ದಾಖಲಾಗುತ್ತಿರುವುದು ಬಹಳ ನೋವು ತರಿಸುತ್ತಿದೆ. ಹೋರಾಟಗಳಲ್ಲಿ ಯಾವುದೇ ನಾಯಕರೂ ಇಲ್ಲ. ಅಕ್ರೋಶಗಳು ತಾನಾಗಿಯೇ ಮೇಲೇಳುತ್ತಿದೆ. ಯುವಕರ ಕೋಪವನ್ನು ನೀವು ತಿರಸ್ಕರಿಸಿದ್ದೇ ಆದರೆ, ನಿಮಗೆ ನೀವೇ ಅಂತ್ಯಕಾಲ ತಂದುಕೊಂಡಂತೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ. 

ಇದೇ ವೇಳೆ ಕಾಯ್ದೆ ಕುರಿತು ದೊಡ್ಡ ದೊಡ್ಡ ಸ್ಟಾರ್ ನಟ ಹಾಗೂ ನಟಿಯರು ಮೌನ ತಾಳಿರುವ ಕುರಿತು ಮಾತನಾಡಿದ ಅವರು, ನಟರು ಯಾವ ಕಾರಣಕ್ಕೆ ಮಾತನಾಡುತ್ತಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಅವರ ಆದಾಯದ ಮೇಲೆ ಪರಿಣಾಮ ಬೀರಬಹುದು. ಇದರಿಂದ ತಮ್ಮ ವೃತ್ತಿಜೀವನ ನಶಿಸಬಹುದು ಎಂಬ ಭಯ ಅವರಲ್ಲಿದೆ. ನಟ ಹಾಗೂ ನಟಿಯವರು ಕೇವಲ ಅವರವರ ಜೀವನದ ಬಗ್ಗೆಯಷ್ಟೇ ಚಿಂತನೆ ನಡೆಸುತ್ತಾರೆ. ಇತರರ ಬಗ್ಗೆಯಲ್ಲ ಎಂದಿದ್ದಾರೆ. 

ಉನ್ನತ ಸ್ಥಾನದಲ್ಲಿದ್ದರೂ ದೀಪಿಕಾ ಪ್ರತಿಭಟನಾಕಾರರ ಜೊತೆಗೂಡಿದ್ದನ್ನು ನಾನು ಬೆಂಬಲಿಸಬೇಕು. ಇದೇ ರೀತಿ ಹಲವರು ಕೂಡ ದನಿ ಎತ್ತಬೇಕು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ದೀಪಿಕಾ ಮೇಲೆ ಪರಿಣಾಮ ಬೀರಬಹುದು. ಚಿತ್ರರಂಗಕ್ಕೆ ಹಣವೇ ದೇವರು ಎಂದು ಕಿಡಿಕಾರಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com