ಬೆಂಗಳೂರು ಫಿಲ್ಮ್ ಫೆಸ್ಟಿವಲ್
ಬೆಂಗಳೂರು ಫಿಲ್ಮ್ ಫೆಸ್ಟಿವಲ್

ಬೆಂಗಳೂರು ಫಿಲ್ಮ್ ಫೆಸ್ಟಿವಲ್: ಸಿನೆಮಾ ನೋಡಲು ಮುಗಿಬಿದ್ದ ಪ್ರೇಕ್ಷಕರು!

ನಗರದಲ್ಲಿ‌ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಿನೆಮಾಗಳನ್ನು ನೋಡಲು  ಪಾಸುಗಳನ್ನು ವಿತರಿಸಲಾಗಿದೆ.ಇದರ ಜೊತೆಗೆ ಟೋಕನ್‍ಗಳನ್ನು ವಿತರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Published on

ಬೆಂಗಳೂರು: ನಗರದಲ್ಲಿ‌ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಿನೆಮಾಗಳನ್ನು ನೋಡಲು  ಪಾಸುಗಳನ್ನು ವಿತರಿಸಲಾಗಿದೆ.ಇದರ ಜೊತೆಗೆ ಟೋಕನ್‍ಗಳನ್ನು ವಿತರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪ್ರೇಕ್ಷಕರು ಉತ್ತಮ ಸಿನೆಮಾಗಳನ್ನು ನೋಡಲು‌ ಸದಾ ಅತ್ಯುತ್ಸಾಹ ತೋರಿಸುತ್ತಾರೆ ಎಂಬುದು ಚಿತ್ರೋತ್ಸವದಲ್ಲಿ ಸಾಬೀತಾಗುತ್ತಿದೆ. ಅಂತರಾಷ್ಟ್ರೀಯ ಮಟ್ಟದ ಪುರಸ್ಕಾರಗಳನ್ನು ಪಡೆದ ಸಿನೆಮಾಗಳನ್ನು  ನೋಡಲು ತಾಸುಗಟ್ಟಲೇ ಸರದಿಯಲ್ಲಿ ನಿಲ್ಲುತ್ತಿದ್ದಾರೆ. 

ಇಂದು ಸಂಜೆ 5.30ಕ್ಕೆ ಒರಾಯನ್ ಮಾಲ್‍ ಪಿ.ವಿ.ಆರ್. ಸಿನೆಮಾದ ಸ್ಕ್ರೀನ್ ನಂಬರ್ 5ರಲ್ಲಿ ಪ್ಯಾರಾಸೈಟ್, 7ರಲ್ಲಿ "ಪೇನ್ ಆ್ಯಂಡ್ ಗ್ಲೋರಿ" ಪ್ರದರ್ಶನ ನಿಗದಿಯಾಗಿತ್ತು. ಪ್ರೇಕ್ಷಕರು ಎರಡೂವರೆ ತಾಸಿಗೂ ಮೊದಲೇ ಸಾಲುಗಟ್ಟಿ
ನಿಲ್ಲಲಾರಂಭಿಸಿದರು. 

ಸರದಿ ಸಾಲು ಬೆಳೆಯುತ್ತಿರುವುದನ್ನು ಗಮನಿಸಿದ ಸಂಘಟಕರು ನೂಕುನುಗ್ಗಲು - ಗದ್ದಲ ತಪ್ಪಿಸಲು ಟೋಕನ್ ಗಳನ್ನು ವಿತರಿಸಲು‌ ನಿರ್ಧರಿಸಿದರು.ನೋಡ ನೋಡುತ್ತಿದ್ದಂತೆ ಎರಡೂ ಸಿನೆಮಾಗಳಿಗೂ 760 ಟೋಕನ್ ಗಳು ವಿತರಣೆಯಾಯಿತು. ಇದರ ಬಗ್ಗೆ ಗೊತ್ತಿಲ್ಲದ ಅನೇಕರು ಸರದಿಗೆ ಸೇರ್ಪಡೆಯಾಗುತ್ತಲೇ ಇದ್ದರು. ಈಗಾಗಲೇ ಟೋಕನ್ ವಿತರಿಸಲಾಗಿದೆ ಎಂದು ತಿಳಿದ
ನಂತರ ಕೆಲವರು ಅಕ್ಕಪಕ್ಕದ ಸ್ಕ್ರೀನ್ ಗಳಿಗೆ ತೆರಳಿದರು. ಇನ್ನೂ‌ ಕೆಲವರು ಒಂದು ಅವಕಾಶ ತೆಗೆದುಕೊಳ್ಳೋಣ ಎಂದು‌ ನಿಂತರು.

"ಪ್ಯಾರಾಸೈಟ್" ಸಿನೆಮಾ ನೋಡಲು ಅಪಾರ ಬೇಡಿಕೆ ಬಂದ‌ ಮುಖ್ಯ ಕಾರಣವೆಂದರೆ ಇದಕ್ಕೆ ಅಂತರಾಷ್ಟ್ರೀಯ, ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ  ದೊರೆತಿರುವುದೇ ಕಾರಣ.ಇದು ದಕ್ಷಿಣ ಕೊರಿಯಾ ಸಿನೆಮಾವಾಗಿದ್ದು ಖ್ಯಾತ ನಿರ್ದೇಶಕ ಬಾಂಗ್ ಜಾನ್ ಹೊ ನಿರ್ದೇಶಿದ್ದಾರೆ. ಚಿತ್ರಕಥೆಯನ್ನೂ ಇವರೇ ರಚಿಸಿದ್ದು ಇದಕ್ಕೆ ಹಾನ್ ಜಿನ್ ವಾನ್ ಸಹಕಾರ ನೀಡಿದ್ದಾರೆ.

2013 ರ ನಂತರ ಆಸ್ಕರ್ ಪ್ರಶಸ್ತಿಗೆ ಯಾವ ಸಿನೆಮಾಗಳು ಅವಿರೋಧವಾಗಿ ಆಯ್ಕೆಯಾಗಿರಲಿಲ್ಲ. ಈ ಹೆಗ್ಗಳಿಗೂ ಪ್ಯಾರಾಸೈಟ್ ಪಾತ್ರವಾಗಿದೆ. ಇದರ ಜತೆಗೆ ಸಿನೆಮಾದ ಚಿತ್ರಕಥೆ, ನಿರ್ದೇಶನ, ಸಂಕಲನ ಹೀಗೆ ಬೇರೆಬೇರೆ ವಿಭಾಗಗಳಿಗೆ ನೀಡುವ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಪ್ಯಾರಸೈಟ್ 2019 ಡಿಸೆಂಬರ್ ನಲ್ಲಿಯೇ ದಕ್ಷಿಣ ಕೊರಿಯಾ ಸೇರಿದಂತೆ ವಿಶ್ವದ ಬೇರೆಬೇರೆ ದೇಶಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮನ್ನಣೆ ಜತೆಗೆ ಭಾರಿ ಹಣವನ್ನೂ ಗಳಿಸಿದೆ. ಸ್ಪೇನಿಶ್ ಸಿನೆಮಾ "ಪೇನ್ ಆ್ಯಂಡ್ ಗ್ಲೋರಿ"  2019ರಲ್ಲಿ ಕ್ಯಾನಸ್ ಫಿಲ್ಮ್ ಫೆಸ್ಟಿವಲ್‌ ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿದೆ.  

ಬೆಂಗಳೂರು ಚಿತ್ರೋತ್ಸವದಲ್ಲಿ ಫೆಬ್ರವರಿ 27ರಂದು "ಪ್ಯಾರಸೈಟ್"ಪ್ರದರ್ಶನಗೊಂಡಿತ್ತು.‌ ಅಂದು ಸಹ ಇದನ್ನು ನೋಡಲು ಪ್ರೇಕ್ಷಕರು ಭಾರಿ ಸಂಖ್ಯೆಯಲ್ಲಿ ಸೇರಿದ್ದರು. ಅನೇಕರು ಟೋಕನ್ ದೊರೆಯದೇ ನಿರಾಶರಾಗಿ ಹಿಂದಿರುಗಿದರು. ಇಂದು ಸಹ ಅದೇ
ಪರಿಸ್ಥಿತಿ ಮರುಕಳಿಸಿತು.

ವಿಶೇಷ ವರದಿ: ಕುಮಾರ ರೈತ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com