ಕಾಸಿಲ್ಲದೆ ಕ್ರಿಕೆಟ್‌ ಕೆರಿಯರ್‌ ಕೈಬಿಟ್ಟಿದ್ದ ನಟ ಇರ್ಫಾನ್‌ ಖಾನ್, ಕೊಹ್ಲಿ, ಸಚಿನ್ ಸಂತಾಪ!

'ಸ್ಲಮ್‌ ಡಾಗ್‌ ಮಿಲಿಯನೇರ್' ಮತ್ತು 'ಲೈಫ್‌ ಆಫ್‌ ಪೈ' ನಂತಹ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿ ಭಾರತಕ್ಕೆ ಕೀರ್ತಿ ತಂದಿದ್ದ ಹೆಸರಾಂತ ನಟ ಇರ್ಫಾನ್‌ ಖಾನ್‌ (53) ಅನಾರೋಗ್ಯದ ಕಾರಣ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ.
ಇರ್ಫಾನ್ ಖಾನ್-ಕೊಹ್ಲಿ-ಸಚಿನ್
ಇರ್ಫಾನ್ ಖಾನ್-ಕೊಹ್ಲಿ-ಸಚಿನ್

ನವದೆಹಲಿ: 'ಸ್ಲಮ್‌ ಡಾಗ್‌ ಮಿಲಿಯನೇರ್' ಮತ್ತು 'ಲೈಫ್‌ ಆಫ್‌ ಪೈ' ನಂತಹ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಹಾಲಿವುಡ್‌ ಸಿನಿಮಾಗಳಲ್ಲಿ ನಟಿಸಿ ಭಾರತಕ್ಕೆ ಕೀರ್ತಿ ತಂದಿದ್ದ ಹೆಸರಾಂತ ನಟ ಇರ್ಫಾನ್‌ ಖಾನ್‌ (53) ಅನಾರೋಗ್ಯದ ಕಾರಣ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ.

ಸಿನಿಮಾ ಜಗತ್ತಿನಲ್ಲಿ ಮನಮೋಹಕ ನಟನೆ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿ ಅಸಂಖ್ಯಾತ ಅಭಿಮಾನಿಗಳ ಮನ ಗೆದ್ದಿದ್ದ ಇರ್ಫಾನ್‌ ಖಾನ್‌ ನಟನೆ ಆಯ್ಕೆ ಮಾಡಿಕೊಂಡದ್ದು ಅಚಾನಕ್ಕಾಗಿ ಎಂಬುದು ವಿಶೇಷ. ಅಂದಹಾಗೆ ನಟನಾಗುವ ಮೊದಲು ಇರ್ಫಾನ್‌ ಒಬ್ಬ ಕ್ರಿಕೆಟರ್‌ ಆಗಬೇಕು ಎಂದು ಕನಸು ಕಂಡಿದ್ದರು ಎಂಬ ವಿಚಾರ ಹಲವರಿಗೆ ತಿಳಿದಿಲ್ಲ.

ಹೌದು, ಇರ್ಫಾನ್‌ ನಟನೆಯಷ್ಟೇ ಅದ್ಭುತವಾಗಿ ಕ್ರಿಕೆಟ್‌ ಆಡುತ್ತಿದ್ದರು. "ಇರ್ಫಾನ್ ಆರಂಭಿಕ ದಿನಗಳಲ್ಲಿ 23 ವರ್ಷದೊಳಗಿನವರ ಸಿಕೆ ನಾಯ್ಡು ಟ್ರೋಫಿ ಟೂರ್ನಿಗೆ ಆಯ್ಕೆಯಾಗಿದ್ದರು. ಆದರೆ ಹಣದ ಕೊರತೆಯಿಂದಾಗಿ ಅವರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ" ಎಂದು ಇರ್ಫಾನ್‌ ಜೊತೆಗೆ ಸಿಕೆ ನಾಯ್ಡು ಟ್ರೋಫಿಗೆ ಆಯ್ಕೆಯಾಗಿದ್ದ ಅವರ ಸ್ನೇಹಿತ ಸತೀಶ್‌ ಶರ್ಮಾ ಹೇಳಿದ್ದಾರೆ.

1994-98ರವರೆಗೆ 'ಚಂದ್ರಕಾಂತ' ಹಾಗೂ 'ಬನೇಗಿ ಅಪ್ನಿ ಬಾತ್‌' ನಂತಹ ಜನಪ್ರಿಯ ದಾರಾವಾಹಿಗಳಲ್ಲಿ ನಟಿಸಿದ್ದ ಇರ್ಫಾನ್‌ ಖಾನ್‌, 1988ರಲ್ಲಿ ನ್ಯಾಷನಲ್ ಸ್ಕೂಲ್‌ ಆಫ್‌ ಡ್ರಾಮಾದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿ ಆಗಿರುವಾಗಲೇ 'ಸಲಾಮ್‌ ಬಾಂಬೆ' ಚಿತ್ರದಲ್ಲಿ ನಟನೆಯ ಆಹ್ವಾನ ಪಡೆದುಕೊಂಡಿದ್ದರು. ಅಂದಿನಿಂದ ಕ್ರಿಕೆಟ್‌ ವೃತ್ತಿ ಬದುಕಿನ ಕಡೆಗೆ ಅವರು ತಿರುಗಿ ನೋಡಿದ್ದಿಲ್ಲ.

ಇನ್ನು ಮೂರು ದಿನಗಳ ಹಿಂದಷ್ಟೇ 95 ವರ್ಷದ ತಾಯಿಯನ್ನು ಕಳೆದುಕೊಂಡಿದ್ದ ಶಹಬ್‌ಝಾದೆ ಇರ್ಫಾನ್‌ ಅಲಿ ಖಾನ್‌, ತಮ್ಮ ತಾಯಿಗೆ ಪೆಟ್ಟಿಗೆ ತುಂಬ ಹಣ ತುಂಬಿ ತಂದುಕೊಡುವ ಕನಸು ಕಂಡಿದ್ದರಂತೆ. ಅಂತೆಯೇ ಕಠಿಣ ಪರಿಶ್ರಮದ ಮೂಲಕ ನಟನೆಯಲ್ಲಿ ಸಾಧನೆಯ ಮೆಟ್ಟಿಲನ್ನೇರಿ 2011ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾದರು. ಅಂದಹಾಗೆ ಅವರ ಬಾಲಿವುಡ್‌ ಸಿನಿಮಾ 'ಲಂಚ್‌ ಬಾಕ್ಸ್‌' ಟಿಎಫ್‌ಸಿಎ (ಟೊರಾಂಟೊ ಫಿಲ್ಮ್ ಕ್ರಿಟಿಕ್ಸ್‌ ಅಸೋಸಿಯೇಷನ್ ಅವಾರ್ಡ್‌) ಪ್ರಶಸ್ತಿ ಪಡೆದ ಏಕಮಾತ್ರ ಭಾರತೀಯ ಸಿನಿಮಾ ಆಗಿದೆ.

ಇನ್ನು ಬಹುಬೇಗನೆ ಅಗಲಿದ ಬಾಲಿವುಡ್‌ ತಾರೆಯರಿಗೆ ಕ್ರಿಕೆಟ್‌ ದಿಗ್ಗಜರು ಕೂಡ ಟ್ವಿಟರ್‌ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ. 

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌, "ಇರ್ಫಾನ್‌ ಖಾನ್‌ ನಿಧನದ ಸುದ್ದಿ ಕೇಳಿ ಬಹಳ ಬೇಸರವಾಗಿದೆ. ಅವರು ನನ್ನ ಅಚ್ಚುಮೆಚ್ಚಿನ ನಟರಲ್ಲಿ ಒಬ್ಬರು. ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. 'ಅಂಗ್ರೇಝಿ ಮೀಡಿಯಮ್' ಕೊನೆಯ ಚಿತ್ರ. ನಟನೆ ಎಂಬುದು ಅವರಲ್ಲಿ ಶ್ರಮವಿಲ್ಲದೆ ಹೊರಬರುತ್ತಿತ್ತು. ಅದ್ಭುತ ಕಲಾವಿದ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಪ್ರೀತಿಪಾತ್ರರಿಗೆ ದುಃಖ ಭರಿಸುವ ಶಕ್ತಿ ಸಿಗಲಿ," ಎಂದು ಟ್ವಿಟರ್‌ನಲ್ಲಿ ಸಂದೇಶ ಬರೆದಿದ್ದಾರೆ.

ಇದೇ ವೇಳೆ ಹಾಲಿ ಮಾಜಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸುರೇಶ್‌ ರೈನಾ, ಶಿಖರ್‌ ಧವನ್‌, ಇಶಾಂತ್‌ ಶರ್ಮಾ, ವೀರೇಂದ್ರ ಸೆಹ್ವಾಗ್‌ ಹಾಗೂ ಅನಿಲ್‌ ಕುಂಬ್ಳೆ ಎಲ್ಲರೂ ಟ್ವಿಟರ್‌ ಮೂಲಕ ತಮ್ಮ ನುಡಿ ನಮನ ಸಲ್ಲಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com