ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಸ್ಥಳ ಅಂತಿಮ; ಧ್ರುವಸರ್ಜಾ ಫಾರ್ಮ್ ಹೌಸ್ ನಲ್ಲಿ ನಾಳೆ ಅಂತಿಮ ವಿಧಿವಿಧಾನ

ಇಂದು ನಿಧನರಾದ ನಟ ಜಿರಂಜೀವಿ ಸರ್ಜಾ ಅವರ ಅಂತಿಮ ವಿಧಿವಿಧಾನ ಸ್ಥಳವನ್ನು ಅಂತಿಮಗೊಳಿಸಲಾಗಿದ್ದು, ಚಿರಂಜೀವಿ ಅವರ ತಮ್ಮ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ನೆರವೇರಿಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.
ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ

ಬೆಂಗಳೂರು: ಇಂದು ನಿಧನರಾದ ನಟ ಜಿರಂಜೀವಿ ಸರ್ಜಾ ಅವರ ಅಂತಿಮ ವಿಧಿವಿಧಾನ ಸ್ಥಳವನ್ನು ಅಂತಿಮಗೊಳಿಸಲಾಗಿದ್ದು, ಚಿರಂಜೀವಿ ಅವರ ತಮ್ಮ ಧ್ರುವ ಸರ್ಜಾ ಅವರ ಫಾರ್ಮ್ ಹೌಸ್ ನಲ್ಲಿ ನೆರವೇರಿಸಲು ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ.

ಮೂಲಗಳ ಪ್ರಕಾರ ಸೋಮವಾರ ಬೆಳಗ್ಗೆ 11 ಗಂಟೆಗೆ ಅಂತ್ಯಕ್ರಿಯೆ ಮಾಡಲು ಕುಟುಂಬ ಸಿದ್ಧತೆ ನಡೆಸಲಾಗುತ್ತಿದೆ. ಈ ಹಿಂದೆ ಚಿರಂಜೀವಿ ಸರ್ಜಾ ಅವರ ಅಂತ್ಯ ಸಂಸ್ಕಾರವನ್ನು ತಾತ ಶಕ್ತಿಪ್ರಸಾದ್ ಅವರ ಸ್ವಗ್ರಾಮ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಮಾಡುವ ಕುರಿತು ಚರ್ಚೆಯಾಗಿತ್ತಾದರೂ, ನಟ ಮತ್ತು ಚಿರಂಜೀವಿ ಅವರ ತಮ್ಮ ಧ್ರುವ ಸರ್ಜಾ ಅವರ ಆಸೆಯಂತೆ ಅವರ ಫಾರ್ಮ್ ಹೌಸ್ ನಲ್ಲಿಯೇ ಚಿರಂಜೀವಿ ಸರ್ಜಾ ಅವರ ಅಂತಿಮ ಸಂಸ್ಕಾರ ನೆರವೇರಿಸಲು ಕುಟುಂಬ ಸದಸ್ಯರು ಒಪ್ಪಿದ್ದಾರೆ.

ಅರ್ಜುನ್ ಸರ್ಜಾ ಒಪ್ಪಿಗೆ
ಇನ್ನು ಚಿರಂಜೀವಿ ಸರ್ಜಾ ಅವರ ಅಂತಿಮ ಸಂಸ್ಕಾರದ ಸ್ಥಳದ ಕುರಿತ ತೀರ್ಮಾನಕ್ಕೆ ಚಿರಂಜೀವಿ ಸರ್ಜಾ ಅವರ ಮಾವ ನಟ ಅರ್ಜುನ್ ಸರ್ಜಾ ಅವರೂ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ  ಕನಕಪುರ ರಸ್ತೆಯ ನೆಲಗೂಳಿ ಗ್ರಾಮದಲ್ಲಿರುವ ಧ್ರುವ ಸರ್ಜಾರ ಫಾರ್ಮ್ ಹೌಸ್​ನಲ್ಲಿ ನಾಳೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಚಿರು ಆಪ್ತ ಶಿವಾರ್ಜುನ್​ ಮಾಹಿತಿ ನೀಡಿದ್ದಾರೆ. 

ಇನ್ನು ನಾಳೆ ಮಧ್ಯಾಹ್ನದವರೆಗೂ ಗಣ್ಯರು, ಅಭಿಮಾನಿಗಳು, ಸಾರ್ವಜನಿಕರು ಚಿರು ಅವರ ಅಂತಿಮ ದರ್ಶನ ಪಡೆದುಕೊಳ್ಳಬಹುದಾಗಿದೆ.

ಅಂತ್ಯಕ್ರಿಯೆಗೆ 150 ಜನರಿಗೆ ಮಾತ್ರ ಅವಕಾಶ
ಇನ್ನು ನಟ ಚಿರಂಜೀವಿ ಸರ್ಜಾ ಅವರ ಮೃತ ದೇಹವನ್ನು ಅಪೋಲೋ ಆಸ್ಪತ್ರೆಯ ವೈದ್ಯರು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನಡೆಯಲಿದ್ದು ಅಂತ್ಯಕ್ರಿಯೆಗೆ 150 ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ. ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಸೀಮಿತ ಜನರಿಗೆ ಮಾತ್ರವೇ ಅವಕಾಶ ನೀಡಲಾಗಿದೆ ಎನ್ನಲಾಗಿದೆ. ಅಂತ್ಯಕ್ರಿಯೆ ವೇಳೆ ಏನೇ ಸಮಸ್ಯೆಯಾದರೂ ಅದರ ಜವಾಬ್ದಾರಿಯನ್ನು ನೀವೇ ತೆಗೆದುಕೊಳ್ಳಬೇಕು ಎಂದು ಸರ್ಜಾ ಕುಟುಂಬಸ್ಥರಿಗೆ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com