ನಟ ಶಿವರಾಂ ಅಂತ್ಯಕ್ರಿಯೆ
ಸಿನಿಮಾ ಸುದ್ದಿ
ಹಿರಿಯ ನಟ ಎಸ್.ಶಿವರಾಂ ಪಂಚಭೂತಗಳಲ್ಲಿ ಲೀನ
ರಾಷ್ಟ್ರಪ್ರಶಸ್ತಿ ಪುರಸ್ಕೃತ ಕನ್ನಡ ಚಿತ್ರರಂಗದ ಹಿರಿಯ ನಟ ಎಸ್.ಶಿವರಾಂ (84) ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಬನಶಂಕರಿಯ ಚಿತಾಗಾರದಲ್ಲಿ ನೆರವೇರಿಸಲಾಯಿತು.
ಬೆಂಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ಕನ್ನಡ ಚಿತ್ರರಂಗದ ಹಿರಿಯ ನಟ ಎಸ್.ಶಿವರಾಂ (84) ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಬನಶಂಕರಿಯ ಚಿತಾಗಾರದಲ್ಲಿ ನೆರವೇರಿಸಲಾಯಿತು.
ಕುಶಾಲತೋಪು ಹಾರಿಸಿ ಪೊಲೀಸರು ಗೌರವ ಸಲ್ಲಿಸಿದರು. ಸರಕಾರದ ಪರವಾಗಿ ಸಚಿವ ಆರ್ ಅಶೋಕ್ ಉಪಸ್ಥಿತರಿದ್ದರು.
ಗುರುಸ್ವಾಮಿಯಾಗಿದ್ದ ಶಿವರಾಂಗೆ ಪಂಚಾಮೃತ ಅಭಿಷೇಕ ಮತ್ತು ಕೇಸರಿ ವಸ್ತ್ರ ಸಮರ್ಪಿಸಿ ಚಿತಾಗಾರಾದಲ್ಲಿ ಬ್ರಾಹ್ಮಣ ಸ್ಮಾರ್ತ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಸಲಾಯಿತು.
ಈ ವೇಳೆ ಅಯ್ಯಪ್ಪ ಭಕ್ತರು ಭಜನೆ ಮಾಡಿ ಅಯ್ಯಪ್ಪನಿಗೆ ಇಷ್ಟವಾದ ಕರ್ಪೂರವನ್ನು ಸಮರ್ಪಿಸಿದರು. ಶಿವರಾಂ ಪುತ್ರರಾದ ಹಿರಿಯ ಮಗ ರವಿಶಂಕರ್ ಮತ್ತು ಲಕ್ಷ್ಮೀಶ್ ಅಗ್ನಿ ಸ್ಪರ್ಶ ಮಾಡಿದರು.
ಈ ಮೊದಲು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಶಿವರಾಂ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು. ಚಿತ್ರರಂಗದ ಹಲವು ಮಂದಿ ಹಿರಿಯ ನಟನ ದರ್ಶನ ಪಡೆದು ಕಂಬನಿ ಮಿಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ