ಕೊರೋನಾ ಲಾಕ್ ಡೌನ್ ಎಫೆಕ್ಟ್: ಒಟಿಟಿಯತ್ತ ಮುಖ ಮಾಡಿದ 'H/34 ಪಲ್ಲವಿ ಟಾಕೀಸ್'

ತಿಲಕ್​-ಯಜ್ಞಾ ಶೆಟ್ಟಿ ಅಭಿನಯದ ನೂತನ ಚಿತ್ರ 'H/34 ಪಲ್ಲವಿ ಟಾಕೀಸ್' ಕೊರೋನಾ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಬಿಡುಗಡೆಗಾಗಿ ಓಟಿಟಿ ಪ್ಲಾಟ್​ಫಾರ್ಮ್ ನತ್ತ ಮುಖ ಮಾಡಿದೆ.
H/34 ಪಲ್ಲವಿ ಟಾಕೀಸ್ ಚಿತ್ರ
H/34 ಪಲ್ಲವಿ ಟಾಕೀಸ್ ಚಿತ್ರ

ಬೆಂಗಳೂರು: ತಿಲಕ್​-ಯಜ್ಞಾ ಶೆಟ್ಟಿ ಅಭಿನಯದ ನೂತನ ಚಿತ್ರ 'H/34 ಪಲ್ಲವಿ ಟಾಕೀಸ್' ಕೊರೋನಾ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಬಿಡುಗಡೆಗಾಗಿ ಓಟಿಟಿ ಪ್ಲಾಟ್​ಫಾರ್ಮ್ ನತ್ತ ಮುಖ ಮಾಡಿದೆ.

ಮಾರಕ ಕೊರೋನಾ ವೈರಸ್ ಹಾವಳಿ ಕಳೆದ ವರ್ಷದಂತೆ ಈ ವರ್ಷವೂ ಚಿತ್ರೋದ್ಯಮವನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಕೊರೊನಾ ವೈರಸ್​ ಹಾವಳಿಯಿಂದಾಗಿ ಸಿನಿಮಾ ಶೂಟಿಂಗ್​ ಮತ್ತು ಪ್ರದರ್ಶನಕ್ಕೆ ಬ್ರೇಕ್​ ಬಿದ್ದಿದೆ. ಆದರೂ ಈ ಸಾಂಕ್ರಾಮಿಕ ಸಂದರ್ಭದಲ್ಲಿ ಓಟಿಟಿ ಪ್ಲಾಟ್​ಫಾರ್ಮ್ ಗಳು ಚಿತ್ರೋಧ್ಯಮಿಗಳ  ಆಶಾಕಿರಣವಾಗಿದ್ದು, ಸಾಕಷ್ಟು ಚಿತ್ರಗಳು ಇದೀಗ ಬಿಡುಗಡೆಗಾಗಿ ಓಟಿಟಿ ಪ್ಲಾಟ್​ಫಾರ್ಮ್ ನತ್ತ ಮುಖ ಮಾಡಿವೆ. 

ಇದಕ್ಕೆ ನೂತನ ಸೇರ್ಪಡೆಯಾಗಿ ತಿಲಕ್​-ಯಜ್ಞಾ ಶೆಟ್ಟಿ ಅಭಿನಯದ ನೂತನ ಚಿತ್ರ 'H/34 ಪಲ್ಲವಿ ಟಾಕೀಸ್' ಸೇರ್ಪಡೆಯಾಗಿದ್ದು, ಜೂನ್​ ಎರಡನೇ ವಾರದ ವೇಳೆ ಒಟಿಟಿ ಪ್ಲಾಟ್​ಫಾರ್ಮ್​ ಮೂಲಕ ಈ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ.

ಈಗಾಗಲೇ ಚಿತ್ರ ಬಿಡುಗಡೆಗೆ ರೆಡಿಯಾಗಿತ್ತಾದರೂ ಕೊರೋನಾ ವೈರಸ್ ಹಾವಳಿಯಿಂದಾಗಿ ಚಿತ್ರ ಬಿಡುಗಡೆ ಮುಂದೂಡಿಕೆಯಾಗಿತ್ತು. ಆದರೆ ಇದೀಗ ಚಿತ್ರ ತಂಡ ಒಟಿಟಿ ಪ್ಲಾಟ್​ಫಾರ್ಮ್​ ಮೂಲಕ ಈ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದೆ. ಈಗಾಗಲೇ ಚಿತ್ರತಂಡ ಚಿತ್ರದ ಒಂದು ಲಿರಿಕಲ್​ ವಿಡಿಯೋ ರಿಲೀಸ್​  ಮಾಡಿತ್ತು. ‘ಬರೆವೆ ಬರೆವೆ ಒಲವ ಕವನ..’ ಎಂಬ ಹಾಡನ್ನು ಆನಂದ್​ ಆಡಿಯೋ ಮೂಲಕ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.  

ಸಚೇಂದ್ರ ಪ್ರಸಾದ್, ಅವಿನಾಶ್, ಸುಧಾ ಬೆಳವಾಡಿ, ಅಚ್ಯುತ್​ ಕುಮಾರ್, ಪದ್ಮಜಾ ರಾವ್, ಕುರಿ ಪ್ರತಾಪ್, ವಿಶ್ವ, ಅಮೃತಾ ಮಯೂರಿ, ರಾಜೇಶ್ವರಿ, ರಾಕ್ ಲೈನ್ ಸುಧಾಕರ್, ಅಜಯ್ ರಾಜ್ ಮುಂತಾದವರು ‘H/34 ಪಲ್ಲವಿ ಟಾಕೀಸ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಕಾಲಭೈರವ ಆರ್ಟ್ಸ್ ಲಾಂಛನದಲ್ಲಿ  ತಯಾರಾಗಿರುವ ಈ ಚಿತ್ರಕ್ಕೆ ಮಂಜುನಾಥ್ ಕೆ. ಮತ್ತು ರವಿಕಿರಣ್ ಎಂ. ಗೌಡ ಬಂಡವಾಳ ಹೂಡಿದ್ದಾರೆ. ಹಾರರ್​, ಸಸ್ಪೆನ್ಸ್​-ಥ್ರಿಲ್ಲರ್​ ಮಾದರಿಯಲ್ಲಿ ಈ ಚಿತ್ರ ಮೂಡಿಬಂದಿದ್ದು, ನಿರ್ದೇಶನದ ಜೊತೆ ಕಥೆ, ಚಿತ್ರಕತೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಶ್ರೀನಿವಾಸ್​ ಚಿಕ್ಕಣ್ಣ ಅವರೇ ನಿಭಾಯಿಸಿದ್ದಾರೆ.  ಮನೋಹರ್​ ಜೋಶಿ ಛಾಯಾಗ್ರಹಣ ಹಾಗೂ ಅಕ್ಷಯ್​ ಪಿ. ರಾವ್​ ಸಂಕಲನ ಮಾಡಿದ್ದಾರೆ. 

ಕೃಷ್ಣ ಟಾಕೀಸ್‌ ವಿಚಾರ ದುರದೃಷ್ಟಕರ
ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕರು, 'ಮುಂದಿನ 10 ದಿನಗಳಲ್ಲಿ ಅಧಿಕೃತ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ನಾವು ಭಯಾನಕ ಅಂಶವನ್ನು ಹೊಂದಿರುವ ಚಿತ್ರಕಥೆಯನ್ನು ರೂಪಿಸಿದ್ದೇವೆ. ಇದು ಹೆಚ್ಚು ಸೈಕೋ-ಥ್ರಿಲ್ಲರ್ ಆಗಿದೆ, ಇದಕ್ಕಾಗಿ ನಾವು ಪ್ರಪಂಚದಾದ್ಯಂತ ನಡೆಯುತ್ತಿರುವ  ಕೆಲವು ಭಯಾನಕ ಘಟನೆಗಳ ಸ್ಪೂರ್ತಿಯಿಂದ ಕೆಲ ಸನ್ನಿವೇಶಗಳನ್ನು ಮತ್ತು ಅಂಶಗಳನ್ನು ತೆಗೆದುಕೊಂಡು ಚಿತ್ರೀಕರಿಸಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಕೃಷ್ಣಾ ಟಾಕೀಸ್ ಚಿತ್ರದ ಕಥಾಹಂದರ ಮತ್ತು ಈ ಚಿತ್ರದ ನಡುವಿನ ಹೋಲಿಕೆಗಳ ಕುರಿತು ಮಾತನಾಡಿದ ಅವರು, ಈ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಆದರೆ ಆ ಬಗ್ಗೆ ನಾನು ಚರ್ಚಿಸಲು ಇಚ್ಚಿಸುವುದಿಲ್ಲ. ನಾನು ಅದನ್ನು ದುರದೃಷ್ಟಕರ ಎಂದು ಭಾವಿಸುತ್ತೇನೆ. ನಾನು ಏಳು ವರ್ಷಗಳ ಹಿಂದೆ ಚಿತ್ರದ  ಕೆಲಸವನ್ನು ಪ್ರಾರಂಭಿಸಿದ್ದೆ. ಅವರು ನಂತರ ಪ್ರಾರಂಭಿಸಿದರು. ನನ್ನ ಕಥಾವಸ್ತುವನ್ನು ಮತ್ತು ನನ್ನ ಒನ್-ಲೈನ್ ಕಥೆಯನ್ನು ಯಾರೋ ಸೋರಿಕೆ ಮಾಡಿದ್ದಾರೆ. ಕೃಷ್ಣ ಟಾಕೀಸ್‌ನ ತಯಾರಕರು ಅದನ್ನು ನನ್ನ ಮುಂದೆ ಬಿಡುಗಡೆ ಮಾಡುವ ಅದೃಷ್ಟ ಹೊಂದಿದ್ದರು ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com