ಬೆಂಗಳೂರು ಮೇರಿ ಜಾನ್ ಎಂದ 'ರತ್ನನ್ ಸುಂದರಿ' ರೆಬಾ ಮೋನಿಕಾ ಜಾನ್ ಗೆ 11 ಪ್ರಶ್ನೆಗಳು

ಮಲಯಾಳಿಯಾದರೂ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಕನ್ನಡ ಬಗ್ಗೆ ಅಭಿಮಾನ ಇರಿಸಿಕೊಂಡಿರುವ ರೆಬಾ, 'ರತ್ನನ್ ಪ್ರಪಂಚ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಈ ಹಿಂದೆ ಅವರು ಹಲವು ಮಲಯಾಳಂ ಮತ್ತು ತಮಿಳು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೆಬಾ ಮೊದಲ ಕನ್ನಡ ಸಿನಿಮಾ 'ರತ್ನನ್ ಪ್ರಪಂಚ' 22ರಂದು ಅಮೆಜಾನ್ ಪ್ರೈಮ್ ನಲ್ಲಿ ತೆರೆ ಕಾಣುತ್ತಿದೆ.
ರತ್ನನ್ ಪ್ರಪಂಚ ಸಿನಿಮಾದಲ್ಲಿ ರೆಬಾ ಮೋನಿಕಾ ಜಾನ್
ರತ್ನನ್ ಪ್ರಪಂಚ ಸಿನಿಮಾದಲ್ಲಿ ರೆಬಾ ಮೋನಿಕಾ ಜಾನ್

ಸಂದರ್ಶನ: ಹರ್ಷವರ್ಧನ್ ಸುಳ್ಯ

'ರತ್ನನ್ ಪ್ರಪಂಚ' ಸಿನಿಮಾದಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳ್ತೀರಾ?

ನಾನು ಮಯೂರಿ ಹೆಸರಿನ ಪತ್ರಕರ್ತೆಯ ಪಾತ್ರ ನಿರ್ವಹಿಸಿದ್ದೀನಿ. ಮಯೂರಿಗೆ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವ ತುಡಿತ. ಒಳ್ಳೊಳ್ಳೆ ಕಥೆಗಳನ್ನು ಶೋಧಿಸಿ ತನ್ನ ಸಾಮರ್ಥ್ಯ ಸಾಬೀತುಪಡಿಸಬೇಕು ಎನ್ನುವ ಮನಸ್ಥಿತಿ ಅವಳದು.
 

ನಿಜಜೀವನದಲ್ಲಿ ಮಯೂರಿಗೂ ರೆಬಾಳಿಗೂ ಏನಾದರೂ ಕನೆಕ್ಷನ್ ಇದೆಯಾ?

ಇದೆ. ಮಯೂರಿ ಥರಾನೆ ನನಗೂ ಸಿನಿಮಾರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ತುಡಿತವಿದೆ. ಮಯೂರಿ ಕಥಾ ಶೋಧನೆಗೆ ಹೊರಡುವಂತೆ ನನಗೂ ಈ ಕ್ಷೇತ್ರದಲ್ಲಿ ನನ್ನದೇ ಛಾಪು ಮೂಡಿಸಬೇಕು ಅನ್ನೋ ಹಂಬಲವಿದೆ. 
 

ರತ್ನನ್ ಪ್ರಪಂಚ ಕಥಾನಾಯಕ ರತ್ನಾಕರ, ಮಯೂರಿ ಜೀವನದಲ್ಲಿ ಹೇಗೆ ಬರುತ್ತಾನೆ?

ಮಯೂರಿ ಕಥೆಯನ್ನು ಶೋಧಿಸುತ್ತಿರುತ್ತಾಳೆ. ಅದೇ ಸಮಯಕ್ಕೆ ಕಾಮನ್ ಮ್ಯಾನ್ ರತ್ನಾಕರ ತನ್ನ ಜೀವನದ ಮಹತ್ತರ ಅನ್ವೇಷಣೆಗಾಗಿ ಪಯಣ ಹೊರಡುತ್ತಾನೆ. ಈ ಪ್ರಯಾಣದಲ್ಲಿ ಅವನಿಗೆ ಮಯೂರಿಯೂ ಸಾಥ್ ನೀಡುತ್ತಾಳೆ. ರತ್ನಾಕರನ ಹುಡುಕಾಟವೂ, ಮಯೂರಿಯ ಕಥಾ ಶೋಧನೆಯೂ ಜೊತೆ ಜೊತೆಯಾಗಿಯೇ ತೆರೆದುಕೊಳ್ಳುತ್ತಾ ಹೋಗುತ್ತದೆ.
 

ಇದು ಟ್ರಾವೆಲ್ ಮೂವಿ ಅಂತ ಕೇಳ್ಪಟ್ಟೆವು. ಪ್ರೇಕ್ಷಕರನ್ನು ಎಲ್ಲೆಲ್ಲಿಗೆ ಕರೆದೊಯ್ಯುತ್ತೀರಾ?

ಹೌದು ಜೀವನದ ಹುಡುಕಾಟದ ಪಯಣ ಅಂತ ಹೇಳಬಹುದು. ಅಲ್ಲದೆ ಚಿತ್ರದ ಕಥೆ ಪ್ರೇಕ್ಷಕರನ್ನು ವಿವಿಧ ಸ್ಥಳಗಳಿಗೆ ಕರೆದೊಯ್ಯುತ್ತದೆ. ಅವು ಕಥೆಗೆ ವಿಭಿನ್ನ ಆಯಾಮ ಒದಗಿಸುತ್ತದೆ. ಯಾವ ಸ್ಥಳಗಳನ್ನು ತೋರಿಸಲಾಗಿದೆ ಎಂಬುದನ್ನು ಸಿನಿಮಾದಲ್ಲೇ ನೋಡಿದರೆ ಇನ್ನೂ ಮಜಾ.
 

ಚಿತ್ರದ ಟ್ರೇಲರ್ ನಲ್ಲಿ ಭಾರತದ  ವಿವಿಧ ಸ್ಥಳಗಳ ಪರಿಚಯ ಕಾಣಿಸುತ್ತದೆ. ರತ್ನಾಕರನ ಪಯಣ ಎಲ್ಲಿಂದ ಶುರುವಾಗುತ್ತದೆ? ಎಲ್ಲಿ ಕೊನೆಗಾಣುತ್ತದೆ?

ಹೌದು. ಚಿತ್ರದ ಕಥೆಯಂತೆ ಭಾರತದ ವಿವಿಧ ನಗರಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ. ರತ್ನಾಕರನ ಪಯಣ ಬೆಂಗಳೂರಿನಿಂದ ಶುರುವಾಗುತ್ತದೆ. ಎಲ್ಲಿ ಕೊನೆಗೊಳ್ಳುತ್ತದೆ ಅನ್ನೋದು ಮಾತ್ರ ಸಸ್ಪೆನ್ಸ್!
 

ಮಲಯಾಳಂ ಸಿನಿಮಾಗಳು ನೈಜತೆಯ ಕಾರಣಕ್ಕೆ ನಮಗೆ ಇಷ್ಟವಾಗುತ್ತದೆ. ನಿಮ್ಮಲ್ಲೂ ಅದೇ ಬಗೆಯ ನ್ಯಾಚುರಲ್ ಚಾರ್ಮ್ ಕಾಣುತ್ತಿದೆ. ಅದು ಪ್ರಯತ್ನಪೂರ್ವಕವೇ?

ಥ್ಯಾಂಕ್ ಯೂ. ಬೆಂಗಳೂರಿನಲ್ಲಿ ಬೆಳೆದಿದ್ದರೂ ಮಲಯಾಳಿ ಆಗಿರುವುದರಿಂದ ಹಾಗನ್ನಿಸುತ್ತಿರಬಹುದು. ಆದರೆ ಒಂದಂತೂ ನಿಜ. ಮಲಯಾಳಿ ಸಿನಿಮಾಗಳಲ್ಲಿ ನೈಜತೆ ಇರುತ್ತದೆ. ಅದರ ಪ್ರಭಾವವೂ ನನ್ನ ಮೇಲೆ ಬೀರಿರಬಹುದು.
 

ಪತ್ರಕರ್ತೆ ಮಯೂರಿ ಪಾತ್ರ ಮಾಡುವಾಗ ನಿಮಗೆ ಎದುರಾದ ದೊಡ್ಡ ಸವಾಲು ಯಾವುದು?

ಭಾಷೆಯದ್ದು. ಕರುನಾಡಲ್ಲೇ ಬೆಳೆದಿದ್ದರಿಂದ ಕನ್ನಡ ಓದೋಕೆ ಬರೆಯೋಕೆ ನನಗೆ ಬರುತ್ತದೆ. ಅದರೆ ಇಲ್ಲಿನವರಷ್ಟು ಪಕ್ವತೆಯಿಂದ ಸಹಜವಾಗಿ ಕನ್ನಡ ಮಾತನಾಡುವುದಿಲ್ಲ ಎನ್ನುವ ಅಂಜಿಕೆ ಮುಂಚಿನಿಂದಲೂ ಇದೆ. 
 

ರತ್ನನ್ ಪ್ರಪಂಚ ಶೂಟಿಂಗ್ ಮಾಡಲ್ಪಟ್ಟ ಸ್ಥಳಗಳಲ್ಲಿ ನಿಮಗಿಷ್ಟವಾದ ಸ್ಥಳ ಯಾವುದು ಮತ್ತು ಯಾಕೆ?

ನನಗಿಷ್ಟವಾಗಿದ್ದು ಕಾಶ್ಮೀರ. ನಾವು ಹೋಗಿದ್ದು ಕೂಡಾ ಚಳಿಗಾಲದಲ್ಲಿ. ಮರಗಟ್ಟುವ ಚಳಿಯ ನಡುವೆ ಶೂಟಿಂಗ್ ಮಾಡಿದ್ದು ಆದ್ಭುತ ಅನುಭವ. ಅಲ್ಲದೆ ಅಲ್ಲಿನ ಸ್ಥಳೀಯರ ಜೊತೆ ಬೆರೆತು ಅವರ ಜೀವನ ಕುರಿತು ತಿಳಿದುಕೊಂಡಿದ್ದು ಕಾಶ್ಮೀರದ ಅನುಭವವನ್ನು ಇನ್ನಷ್ಟು ಶ್ರೀಮಂತವಾಗಿಸಿತು.
 

ರತ್ನನ್ ಪ್ರಪಂಚ ಸಿನಿಮಾ ತಂಡದೊಂದಿಗಿನ ಚಿತ್ರೀಕರಣದ ಅನುಭವ ಹೇಗಿತ್ತು?

ವಂಡರ್ ಫುಲ್. ರತ್ನನ್ ಪ್ರಪಂಚದ ನಿರ್ದೇಶಕ ರೋಹಿತ್ ಪದಕಿ ಅವರ ತಂಡ ಬೆಸ್ಟ್ ತಂಡ. ಹೊಸಬರೊಂದಿಗೆ ಕೆಲಸ ಮಾಡುವ ಅನುಭವ ಯಾವತ್ತಿಗೂ ಅನನ್ಯವಾದುದು. ಅದಕ್ಕೆ ನನ್ನ ಬದುಕಿನಲ್ಲಿ ಸ್ಪೆಷಲ್ ಸ್ಥಾನ ಇರುತ್ತದೆ.
 

ಕನ್ನಡದಲ್ಲಿ ಯಾವ ನಟರೊಂದಿಗೆ ನಟಿಸಲು ಎದುರು ನೋಡುತ್ತೀರಾ?

ಸುದೀಪ್, ರಕ್ಷಿತ್ ಶೆಟ್ಟಿ ಮತ್ತು ಅಫ್ ಕೋರ್ಸ್ ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಲು ಇಷ್ಟ.ಅದರಲ್ಲೂ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕರೆ ನಾನು ಲಕ್ಕಿ.
 

ಜಗತ್ತಿನಲ್ಲೇ ನಿಮಗಿಷ್ಟದ ಸ್ಥಳ ಯಾವುದು? 

ಯಾರಿಗೇ ಆದರೂ ಜಗತ್ತೆಲ್ಲಾ ಸುತ್ತಿ ಬಂದರೂ ಕಡೆಗೆ ನೆಮ್ಮದಿ ಸಿಗೋದು ಮನೆಯಲ್ಲಿ. ಹೀಗಾಗಿ ನನ್ನ ಮನೆಯಾದ ಬೆಂಗಳೂರು ನನಗಿಷ್ಟದ ಸ್ಥಳ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com