ಹೆಡ್ ಬುಷ್ ಚಿತ್ರತಂಡ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಸಂತಸವಿದೆ: ಶ್ರುತಿ ಹರಿಹರನ್

ಮೂರು ವರ್ಷಗಳ ನಂತರ ಸ್ಯಾಂಡಲ್'ವುಡ್'ಗೆ ನಟಿ ಶ್ರುತಿ ಹರಿಹರನ್ ಅವರು ಕಮ್ ಬ್ಯಾಕ್ ಆಗಿದ್ದು, ಹೆಡ್ ಬುಷ್ ಚಿತ್ರ ತಂಡ ತಮ್ಮನ್ನು ಚಿತ್ರದಲ್ಲಿ ನಟಿಸಲು ಆಯ್ಕೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಶ್ರುತಿ ಹರಿಹರನ್
ಶ್ರುತಿ ಹರಿಹರನ್

ಮೂರು ವರ್ಷಗಳ ನಂತರ ಸ್ಯಾಂಡಲ್'ವುಡ್'ಗೆ ನಟಿ ಶ್ರುತಿ ಹರಿಹರನ್ ಅವರು ಕಮ್ ಬ್ಯಾಕ್ ಆಗಿದ್ದು, ಹೆಡ್ ಬುಷ್ ಚಿತ್ರ ತಂಡ ತಮ್ಮನ್ನು ಚಿತ್ರದಲ್ಲಿ ನಟಿಸಲು ಆಯ್ಕೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ರಾಟೆ, ಬ್ಯೂಟಿಫುಲ್ ಮನಸುಗಳು, ತಾರಕ್ ಮತ್ತು ನಾತಿಚರಾಮಿಯಂತಹ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಶ್ರುತಿ ಹರಿಹರನ್ ಯಾವಾಗಲೂ ಲೇಖಕರ ಹಿನ್ನೆಲೆಯ ಪಾತ್ರಗಳನ್ನು ಮಾಡಲು ಆದ್ಯತೆ ನೀಡುವ ಕೆಲವೇ ಕೆಲವು ನಟಿಯರಲ್ಲಿ ಒಬ್ಬರಾಗಿದ್ದಾರೆ. 

ಹೆರಿಗೆ, ತಾಯ್ತನದಿಂದ ಒಂದು ವರ್ಷ ಹೋಗಿತ್ತು. ಸಾಂಕ್ರಾಮಿಕ ರೋಗ 2 ವರ್ಷ ಚಿತ್ರರಂಗಕ್ಕೆ ಮರಳಿ ಬಾರದಂತೆ ತಡೆದಿತ್ತು. ಆದರೂ, ನಟನೆಯ ಕುರಿತ ನನ್ನ ಉತ್ಸಾಹ ಮಾತ್ರ ಬದಲಾಗಲಿಲ್ಲ. ಸಿನಿಮಾ ಎಂಬ ಪ್ರಪಂಚದಲ್ಲಿ ಇರಲು ನನಗೆ ಸಂತಸವಿದೆ. ಈ ಸೃಜನಶೀಲ ಪ್ರಕ್ರಿಯೆಯ ಭಾಗವಾಗಿರುವಾಗಲೆಲ್ಲಾ ನನ್ನ ಜೀವನದ ಉದ್ದೇಶವನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ. ವಯಸ್ಸು ಮತ್ತು ಸಂದರ್ಭಗಳನ್ನು ಲೆಕ್ಕಿಸದೆ, ನಾನು ನಟನೆಯನ್ನು ಆನಂದಿಸುತ್ತೇನೆ ಮತ್ತು ಸಿನಿಮಾ ಎಂಬ ಅಂಶದಲ್ಲಿ ಸದಾಕಾಲ ಭಾಗವಾಗಿರಲು ಬಯಸುತ್ತೇನೆಂದು ಶ್ರುತಿ ಹರಿಹರನ್ ಅವರು ಹೇಳಿದ್ದಾರೆ. 

ಹೆಡ್ ಬುಷ್ ಭೂಗತ ಲೋಕ ಕುರಿತ ಕಥೆಯೆಂದು ಬಿಂಬಿಸಬಹುದು. ಆದರೆ, ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಚಿತ್ರವಾಗಿದೆ. ಚಿತ್ರದಲ್ಲಿ ನಾನು ರತ್ನಪ್ರಭಾ ಎಂಬ ಪಾತ್ರವನ್ನು ನಿಭಾಯಿಸಿದ್ದು, ಈ ಪಾತ್ರ ಅತ್ಯಂತ ಮಹತ್ವವನ್ನು ಹೊಂದಿದೆ. ರಾಜಕೀಯ ಸದಾಕಾಲ ನನ್ನಲ್ಲಿ ಕುತೂಹಲವನ್ನು ಮೂಡಿಸುತ್ತಿತ್ತು. ಚಿತ್ರ ಕಥೆ ನನ್ನ ಬಳಿಗೆ ಬಂದಾಗ 1974-78ರಲ್ಲಿ ನಮ್ಮ ನಗರದಲ್ಲಿಯೇ ನಡೆದ ನೈಜ ಘಟನೆ ಎಂಬುದು ನನಗೆ ತಿಳಿಯಿತು. ಅಂದು ನಡೆದ ಘಟನೆಗಳು ಅತ್ಯಂತ ಭಯಾನಕ ಹಾಗೂ ಭೀತಿಯನ್ನುಂಟು ಮಾಡುತ್ತದೆ ಎಂದು ಚಿತ್ರ ಕಥೆ ಕುರಿತು ಶ್ರುತಿ ಹರಿಹರನ್ ಅವರು ಹೇಳಿದ್ದಾರೆ. 

ಅಧಿಕಾರದ ಆಟವನ್ನು ಇಷ್ಟಪಡುವವರಿದ್ದರೆ, ಹೆಡ್ ಬುಷ್ ಚಿತ್ರ ನಿಮಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ. ಚಿತ್ರದಲ್ಲಿ ನನ್ನ ಪಾತ್ರ ಆದರ್ಶವಾದಿ ಹಾಗೂ ನೀತಿವಂತ ಮಹಿಳೆಯ ಪಾತ್ರವಾಗಿದೆ. ರತ್ನಪ್ರಭಾ ಪ್ರಭಾವಿ ಕುಟುಂಬದಿಂದ ಬಂದವಳಾಗಿದ್ದು, ರಾಜಕೀಯ ವ್ಯವಸ್ಥೆಯಲ್ಲಿ ಬೆಳೆದ ಅವರು ಅತ್ಯಂತ ಆದರ್ಶವಾದಿ ಮತ್ತು ಉನ್ನತ ನೈತಿಕ ಮೌಲ್ಯಗಳನ್ನು ಹೊಂದಿರುತ್ತಾರೆ. ಆಕೆಯನ್ನು ಮದುವೆಯಾಗುವ ವ್ಯಕ್ತಿ ಬೇರೆ ಜಾತಿಯವನಾಗಿರುತ್ತಾನೆ. ಅವಳು ಸಂಪೂರ್ಣವಾಗಿ ಸಮಾನತೆಯನ್ನು ನಂಬುವ ಮತ್ತು ಮಾತಿನಂತೆ ನಡೆಯುವ ವ್ಯಕ್ತಿತ್ವ ಹೊಂದಿರುತ್ತಾರೆ. ಅವಳು ಸರಿ ಮತ್ತು ತಪ್ಪುಗಳ ನಡುವೆ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಿರುವ, ಅಭಿಪ್ರಾಯ ವ್ಯಕ್ತಪಡಿಸುವ ಮಹಿಳೆಯಾಗಿರುತ್ತಾಳೆ. ಮತ್ತು ಹಿಂಸಾಚಾರದ ವಿರುದ್ಧವಿರುತ್ತಾಳೆ. 

3 ವರ್ಷಗಳ ಬಳಿಕ ಪರದೆ ಮೇಲೆ ನನ್ನನ್ನು ನಾನು ನೋಡಿಕೊಳ್ಳಲು ಬಹಳ ಉತ್ಸುಕಳಾಗಿದ್ದಾನೆ. ಸಾಕಷ್ಟು ಕುತೂಹಲವೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮಗು ನನ್ನನ್ನು ದೈಹಿಕವಾಗಿ ಬದಲಾಯಿಸಿದೆ. ಇದೀಗ ನಾನು ಬಹಳ ವಿಭಿನ್ನವಾಗಿ ಕಾಣಿಸುತ್ತಿದ್ದೇನೆ. ಪರದೆ ಮೇಲೆ ನನ್ನನ್ನು ನನ್ನ ಮಗು ನೋಡಿದಾಗ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ನನಗೆ ತಿಳಿದಿಲ್ಲ. ಅದನ್ನು ನೋಡಲು ಸಾಕಷ್ಟು ಕಾತುರವಿದೆ. 

ಅಗ್ನಿ ಸರ್ ಕಥೆಯನ್ನು ಹೇಳಿದಾಗ ಧನಂಜಯ್ ಅವರಿಗೆ ರತ್ನಪ್ರಭಾ ಪಾತ್ರಕ್ಕೆ ಮೊದಲು ತಲೆಗೆ ಬಂದಿರುವ ಹೆಸರು ನಾನು. ತಂಡದ ಇತರರೂ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆಂದೆನಿಸುತ್ತದೆ. ಧನಂಜಯ್ ಅವರು ನನಗೆ ದೂರವಾಣಿ ಕರೆ ಮಾಡಿ ಚಿತ್ರದ ಬಗ್ಗೆ ಹೇಳಿದರು. ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. ಕೂಡಲೇ ನಾನು ಚಿತ್ರಕ್ಕೆ ಯೆಸ್ ಎಂದೆ. ನಾನು ಸದಾಕಾಲ ಧನಂಜಯ್ ಅವರ ಯಶಸ್ಸನ್ನೇ ಬಯಸುತ್ತೇನೆ. ಸಿನಿಮಾ ಕೂಡ ತನ್ನ ಜನರನ್ನು ತನ್ನತ್ತ ಸೆಳೆಯುತ್ತದೆ. ಹೆಡ್ ಬುಷ್ ಚಿತ್ರ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಸಂತಸವಿದೆ ಎಂದಿದ್ದಾರೆ. 

ನಿರ್ದೇಶನದತ್ತ ನನ್ನ ಚಿತ್ತ ಹರಿದಿದೆ. ಆದರೆ, ನಟಿಯಾಗಿ ಪಾತ್ರ, ಕಥೆ ಮತ್ತು ಚಿತ್ರತಂಡದಿಂದ ಸ್ಫೂರ್ತಿ ಪಡೆಯದ ಹೊರತು ಅಷ್ಟು ಸುಲಭವಾಗಿ ಪಾತ್ರಗಳನ್ನು ಆರಿಸಿಕೊಳ್ಳುವುದಿಲ್ಲ. ನಾನು ಮಾಡಿರುವ ಕೆಲವು ಚಿತ್ರಗಳು ಇನ್ನೂ ಬಿಡುಗಡೆಯಾಗಬೇಕಿದೆ. ಸಾರಾಂಶ, ಈಗಾ, ನಿರ್ದೇಶಕ ಎಂಎಸ್ ಶಂಕರ್ ಅವರ ಕಥಾಸಂಕಲನ, ರಕ್ಷಿತ್ ಶೆಟ್ಟಿ ಅವರ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ನಿರ್ಮಿಸಲಾದ ಸ್ಟ್ರಾಬೆರಿ, ಮತ್ತು ಅರ್ಜುನ್ ಲೂಯಿಸ್ ನಿರ್ದೇಶನ ಮತ್ತು ಇತರ ಚಿತ್ರಗಳು ನಿರ್ಮಾಣದ ವಿವಿಧ ಹಂತಗಳಲ್ಲಿವೆ ಎಂದು ಶ್ರುತಿ ಹರಿಹರನ್ ಅವರು ತಮ್ಮ ಮುಂದಿನ ಚಿತ್ರಗಳ ಕುರಿತು ಮಾಹಿತಿ ನೀಡಿದ್ದಾರೆ. 

ಹೆಡ್ ಬುಷ್ ಅಗ್ನಿ ಶ್ರೀಧರ್ ಅವರ ಆತ್ಮಕಥೆಯನ್ನು ಆಧರಿಸಿದ್ದು, ಇದು 70 ರ ದಶಕದ ಬೆಂಗಳೂರು ನಗರ ಮತ್ತು ಅಂದಿನ ಭೂಗತ ಜಗತ್ತು, ವಿಶೇಷವಾಗಿ ಸಂಸದ ಜಯರಾಜ್ ಅವರ ಜೀವನವನ್ನು ಆಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com