'ಬೆಂಗಳೂರು ಬಗ್ಗೆ ಸಾಕಷ್ಟು ಸುಂದರ ನೆನಪುಗಳಿವೆ, ನನ್ನ ತಂದೆ ನಾನು ಬೆಂಗಳೂರಿನಲ್ಲಿ ನೆಲೆಸಬೇಕೆಂದು ಬಯಸಿದ್ದರು': ಹೇಮಾ ಮಾಲಿನಿ

ಡ್ರೀಮ್ ಗರ್ಲ್, ಕನಸಿನ ಕನ್ಯೆ ಹೇಮಾ ಮಾಲಿನಿ ದಶಕಗಳ ಕಾಲ ಪ್ರೇಕ್ಷಕರನ್ನು ತಮ್ಮ ನಟನೆ ಮತ್ತು ನೃತ್ಯದಿಂದ ಮನರಂಜಿಸಿದವರು. ಡ್ರೀಮ್ ಗರ್ಲ್, ಶೋಲೆಯಂತಹ ಚಿತ್ರಗಳಲ್ಲಿ ಮರೆಯಾಗದಿರುವ ಪಾತ್ರಗಳನ್ನು ಮಾಡಿ ಮನಸೂರೆಗೊಂಡವರು. ಇನ್ನು ಅವರ ಭರತನಾಟ್ಯ, ನೃತ್ಯಕ್ಕೆ ಮನಸೋಲದವರೇ ಇಲ್ಲ. 
ನೃತ್ಯ ಭಂಗಿಯಲ್ಲಿ ಡ್ರೀಮ್ ಗರ್ಲ್ ಹೇಮಾ ಮಾಲಿನಿ
ನೃತ್ಯ ಭಂಗಿಯಲ್ಲಿ ಡ್ರೀಮ್ ಗರ್ಲ್ ಹೇಮಾ ಮಾಲಿನಿ

ಡ್ರೀಮ್ ಗರ್ಲ್, ಕನಸಿನ ಕನ್ಯೆ ಹೇಮಾ ಮಾಲಿನಿ (Dream girl Hema Malini) ದಶಕಗಳ ಕಾಲ ಪ್ರೇಕ್ಷಕರನ್ನು ತಮ್ಮ ನಟನೆ ಮತ್ತು ನೃತ್ಯದಿಂದ ಮನರಂಜಿಸಿದವರು. ಡ್ರೀಮ್ ಗರ್ಲ್, ಶೋಲೆಯಂತಹ ಚಿತ್ರಗಳಲ್ಲಿ ಮರೆಯಾಗದಿರುವ ಪಾತ್ರಗಳನ್ನು ಮಾಡಿ ಮನಸೂರೆಗೊಂಡವರು. ಇನ್ನು ಅವರ ಭರತನಾಟ್ಯ, ನೃತ್ಯಕ್ಕೆ ಮನಸೋಲದವರೇ ಇಲ್ಲ. 

73ರ ಈ ಇಳಿವಯಸ್ಸಿನಲ್ಲಿಯೂ 25ರ ಚಿರಯೌವ್ವನೆಯಂತೆ ನೃತ್ಯ ಮಾಡುತ್ತಾರೆ. ಉದ್ಯಾನನಗರಿ ಬೆಂಗಳೂರಿಗೆ (Bengaluru) ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ರಾಧಾ ರಾಸ್ ಬಿಹಾರಿಯಲ್ಲಿ ಪ್ರದರ್ಶನ ನೀಡಲು ಆಗಮಿಸಿದ್ದರು. ಕೃಷ್ಣನ ಪ್ರೇಯಸಿ ರಾಧೆಯ ಪಾತ್ರೆಯಲ್ಲಿ ಕೇವಲ ನೃತ್ಯಗಾರ್ತಿಯಾಗಿ ಮಾತ್ರವಲ್ಲದೆ ಅವರ ಕೌಶಲ್ಯವನ್ನು ಕಲಾವಿದೆಯಾಗಿ ಕಣ್ತುಂಬಿಕೊಳ್ಳಬಹುದು. ಅವರ ನೃತ್ಯ ಪ್ರದರ್ಶನಗಳಲ್ಲಿ ದುರ್ಗೆ ಮತ್ತು ರಾಧೆ ಅತ್ಯಂತ ಜನಪ್ರಿಯ ಮತ್ತು ಮನಮೋಹಕ.

ರಾಧಾ ರಾಸ್ಬಿಹಾರಿ ಶಾಸ್ತ್ರೀಯ ನೃತ್ಯದ ಎಲ್ಲಾ ಪ್ರಕಾರಗಳನ್ನು ಸಂಯೋಜಿಸುತ್ತದೆ. ಭಾರತೀಯ ಮಹಾಕಾವ್ಯವಾದ 'ರಾಧಾ ಮತ್ತು ಕೃಷ್ಣ' ಆಧರಿಸಿ, ಇದು ಕಥಕ್ ಪ್ರದರ್ಶನವಾಗಿದೆ. ನಾನು ಕಳೆದ 10 ವರ್ಷಗಳಿಂದ ಈ ಬ್ಯಾಲೆ ಶೈಲಿಯ ನೃತ್ಯವನ್ನು ಜಗತ್ತಿನಾದ್ಯಂತ ಪ್ರದರ್ಶಿಸುತ್ತಿದ್ದೇನೆ ಎಂದು ಹೇಳುವ ಹೇಮಾ ಮಾಲಿನಿ ಈಗಲೂ ಪ್ರದರ್ಶನದ ದಿನಕ್ಕೆ ಮೂರು ದಿನಗಳ ಮೊದಲು ಪೂರ್ವಾಭ್ಯಾಸ ಮಾಡುತ್ತಾರಂತೆ. ಪ್ರತಿ ಕಾರ್ಯಕ್ರಮವನ್ನೂ  ಹೊಸ ಕಾರ್ಯಕ್ರಮದಂತೆ ನೋಡುತ್ತಾರಂತೆ.

ನಿನ್ನೆ ನಗರದಲ್ಲಿ ನಡೆದ ಎರಡು ಗಂಟೆಗಳ ಬ್ಯಾಲೆ ನೃತ್ಯ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿತು. ಅತೀಂದ್ರಿಯ ಮಹಾರಾಗಳು, ಚೂಡಿವಾಲ್ ಮತ್ತು ಗೊಂಡನೇ ವಾಲಿ ವೇಷಗಳು, ಕೃಷ್ಣನು ರಾಧೆಯನ್ನು ಆಕರ್ಷಿಸುವುದು, ಬರ್ಸಾನದ ಸಂತೋಷದಾಯಕ ಹೋಳಿ ದೃಶ್ಯ, ಕೃಷ್ಣ ಮಥುರಾಗೆ ಹೊರಟು ಕಂಸವನ್ನು ಕೊಲ್ಲುವ ದೃಶ್ಯಗಳೆಲ್ಲಾ ಬಂದುಹೋದವು.

ವಯಸ್ಸು 70 ಕಳೆದರೂ ಇನ್ನೂ ನೃತ್ಯ ಮಾಡುವ ಹುಮ್ಮಸ್ಸು ಹೇಮಾ ಮಾಲಿನಿಯವರಿಗೆ ಇರಲು ಅವರ ಪತಿ ಹಿರಿಯ ನಟ ಧರ್ಮೇಂದ್ರ ಅವರ ಅಪಾರ ಪ್ರೀತಿ, ಮಕ್ಕಳು, ಮೊಮ್ಮಕ್ಕಳ ಜೊತೆ ಕಾರ್ಯಕ್ರಮಕ್ಕೆ ಮೊದಲು ನಡೆಸುವ ಪೂರ್ವಭ್ಯಾಸಗಳೇ ಕಾರಣ ಎನ್ನುತ್ತಾರೆ. ದಶಕಗಳ ಕಾಲ ಬಾಲಿವುಡ್ ಸಿನೆಮಾಗಳಲ್ಲಿ ಬಣ್ಣ ಹಚ್ಚಿದ್ದು, ಸಾವಿರಾರು ನೃತ್ಯ ಶೋಗಳನ್ನು ನೀಡಿದ್ದರೂ ಈಗಲೂ ಪ್ರದರ್ಶನ ನೀಡುವಾಗ ಆರಂಭ ದಿನಗಳ ಹಿಂಜರಿಕೆ ಉಂಟಾಗುತ್ತದಂತೆ. ತಾವು ಆರು ವರ್ಷದ ಪುಟ್ಟ ಬಾಲಕಿಯಾಗಿದ್ದಾಗ ನೀಡಿದ್ದ ಪ್ರದರ್ಶನದ ವೇಳೆ ಆದ ಅನುಭವಗಳೇ ಈಗಲೂ ಆಗುತ್ತದಂತೆ.

ಯಾವುದೇ ನೃತ್ಯವು ಸಾಕಷ್ಟು ಪ್ರಯತ್ನ ಮತ್ತು ಅಭ್ಯಾಸವನ್ನು ಬಯಸುತ್ತದೆ. ಕಲೆಯ ಮೇಲಿನ ಉತ್ಸಾಹ ಮತ್ತು ಸಿದ್ಧತೆಯು ಮುಂದುವರಿಸಿಕೊಂಡು ಹೋಗುತ್ತದೆ. ಕಲಾವಿದೆಯಾಗಿ ಮತ್ತು ನೃತ್ಯಗಾರ್ತಿಯಾಗಿ ನಾನು ನಿರಂತರವಾಗಿ ಕಲೆಯೊಂದಿಗೆ ಸಂಪರ್ಕ ಹೊಂದಿದ್ದೇನೆ. ರಾಮಾಯಣದ ಮೇಲೆ ಬ್ಯಾಲೆ ಪ್ರದರ್ಶಿಸಲು ಮಗಳು ಇಶಾ ಕೂಡ ಇಷ್ಟಪಡುತ್ತಾಳೆ ಎಂದು ‘ಡ್ರೀಮ್ ಗರ್ಲ್’ ಹೇಳುತ್ತಾರೆ. 

ಇನ್ನು ಬೆಂಗಳೂರು ನಗರದ ಬಗ್ಗೆ ಹಲವು ನೆನಪುಗಳನ್ನು ಹೇಮಾ ಮಾಲಿನಿ ಮಾಡಿಕೊಂಡರು. ಶೋಲೆ, ಮೆಹಬೂಬ, ಮಾ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಿದ್ದೆವು. ರಾಮನಗರದ ಬೆಟ್ಟದಲ್ಲಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದೆವು ಎಂದು ಕೂಡ ಕನಸಿನ ಕನ್ಯೆ ನೆನಪು ಮಾಡಿಕೊಂಡರು.

ಬೆಂಗಳೂರಿಗೆ ಬಂದಾಗಲೆಲ್ಲ ಶಾಪಿಂಗ್ ಮಾಡುತ್ತಿದ್ದೆ. ಮೈಸೂರಿನ ಮುದುಮಲೈ ಕಾಡು, ಊಟಿಗೆಲ್ಲ ಹೋಗಿ ಸುತ್ತಾಡುತ್ತಿದ್ದ ಸುಂದರ ನೆನಪುಗಳಿವೆ. ನನ್ನ ತಂದೆಗೆ ನಾನು ಬೆಂಗಳೂರಿನಲ್ಲಿ ನೆಲೆಸಬೇಕೆಂದು ಬಹಳ ಆಸೆಯಿತ್ತು, ಆದರೆ ಬದುಕು ನನ್ನನ್ನು ಬೇರೆಡೆಗೆ ಕರೆದುಕೊಂಡು ಹೋಯಿತು ಎಂದು ಹೇಮಾ ಮಾಲಿನಿ ಹೇಳಿ ನಕ್ಕರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com