ಮತ್ತೆ ಚಿತ್ರರಂಗಕ್ಕೆ ಹೊಸದಾಗಿ ಪ್ರವೇಶಿಸುತ್ತಿರುವ ಅನುಭವವಾಗುತ್ತಿದ್ದೆ: ರಮ್ಯಾ 

ಅಭಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದ ನಟಿ ರಮ್ಯಾ, ಶಿವರಾಜ್ ಕುಮಾರ್, ದರ್ಶನ್, ಸುದೀಪ್ ಮೊದಲಾದ ಸ್ಟಾರ್ ನಟರೊಂದಿಗೆ ನಟಿಸಿ ಸ್ಯಾಂಡಲ್ ವುಡ್ ಕ್ವೀನ್ ಎಂದೇ ಖ್ಯಾತರಾಗಿದ್ದಾರೆ.
ರಮ್ಯಾ
ರಮ್ಯಾ

ಅಭಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದ ನಟಿ ರಮ್ಯಾ, ಶಿವರಾಜ್ ಕುಮಾರ್, ದರ್ಶನ್, ಸುದೀಪ್ ಮೊದಲಾದ ಸ್ಟಾರ್ ನಟರೊಂದಿಗೆ ನಟಿಸಿ ಸ್ಯಾಂಡಲ್ ವುಡ್ ಕ್ವೀನ್ ಎಂದೇ ಖ್ಯಾತರಾಗಿದ್ದಾರೆ. ಕನ್ನಡದಲ್ಲಷ್ಟೇ ಅಲ್ಲದೇ ತಮಿಳಿನಲ್ಲೂ ಅಭಿಮಾನಿಗಳನ್ನು ಹೊಂದಿರುವ ರಮ್ಯಾ, ರಾಜಕೀಯದಲ್ಲಿ ಗಮನ ಕೇಂದ್ರೀಕರಿಸಿದ್ದ ಹಿನ್ನೆಲೆಯಲ್ಲಿ ಚಿತ್ರರಂಗದಿಂದ ಅಲ್ಪವಿರಾಮ ಪಡೆದಿದ್ದರು. ಈಗ ಹತ್ತಿರ ಹತ್ತಿರ ಒಂದು ದಶಕದ ಬಳಿಕ ಮತ್ತೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ನಟಿಸುತ್ತಿದ್ದಾರೆ. 

ರಾಜ್ ಬಿ ಶೆಟ್ಟಿ ನಿರ್ದೇಶನದ, ಈ ಚಿತ್ರವನ್ನು ರಮ್ಯಾ ಅವರ ಆಪಲ್ ಬಾಕ್ಸ್ ಸ್ಟೂಡಿಯೋಸ್ ನಿರ್ಮಾಣ ಮಾಡುತ್ತಿದ್ದು, ಲೈಟರ್ ಬುದ್ಧ ಫಿಲ್ಮ್ಸ್ ಸಹಯೋಗ ಹೊಂದಿದೆ. ಮಿಥುನ್ ಮುಕುಂದನ್ ಸಿನಿಮಾಗೆ ಸಂಗೀತ ನೀಡಲಿದ್ದಾರೆ. ಈ ಸಿನಿಮಾ ಬಗ್ಗೆ ಸಿನಿಮಾ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ರಮ್ಯಾ, ತಾವು ನಟನೆಗೆ ಮರಳುತ್ತಿರುವ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. 

ಮೊದಲ ಬಾರಿಗೆ ಚಿತ್ರರಂಗ ಪ್ರವೇಶಿಸುವಾಗ ಇದ್ದ ಭಾವನೆ ಈಗ ನನ್ನಲ್ಲಿದೆ. ಚಿತ್ರರಂಗ ಪ್ರವೇಶಿಸುವಾಗ ಹೆಚ್ಚು ತಿಳಿದಿರಲಿಲ್ಲ. ಮುಗ್ಧತೆ ಇತ್ತು. ಆಗ ಸಿದ್ಧ ಸೂತ್ರ ಎಂಬುದು ಇರಲಿಲ್ಲ. ಆಗಿನ ಭಯ ಬೇರೆ ರೀತಿಯದ್ದು, ಆದರೆ ಈಗ ಹಲವು ನಿರೀಕ್ಷೆಗಳಿವೆ, ಈಗಿನ ಭಯವೇ ಬೇರೆ ರೀತಿಯದ್ದಾಗಿದೆ. ಆದರೆ ರಾಜ್ ಶೆಟ್ಟಿ ಹಾಗೂ ಅವರು ಬರೆದಿರುವ ಕಥೆಯಿಂದಾಗಿ ನನ್ನಲ್ಲಿ ವಿಶ್ವಾಸ ಮೂಡಿದೆ.

ಮೊದಲ ಬಾರಿಗೆ ನಿರ್ಮಾಪಕಿಯಾಗಿದ್ದುಕೊಂಡು, ಪ್ರತಿಯೊಂದು ಹಂತದಲ್ಲಿಯೂ ನಾನು ತೊಡಗಿಸಿಕೊಂಡಿದ್ದೆವೆ, ಈ ವಿಶಿಷ್ಟ ಪ್ರಯತ್ನದಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸ ಇದೆ. ಇಷ್ಟು ವರ್ಷಗಳ ನಂತರ ಕ್ಯಾಮರಾ ಎದುರಿಸುತ್ತಿರುವುದಕ್ಕೆ ಒಂದು ರೀತಿಯ ಆತಂಕ ಇದ್ದೇ ಇದೆ ಎಂದು ರಮ್ಯಾ ಹೇಳಿದ್ದಾರೆ.

ಇದನ್ನೂ ಓದಿ:ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನಿರ್ಮಾಣದ ಹೊಸ ಸಿನಿಮಾ ಟೈಟಲ್ ರಿವೀಲ್: ಡೈರೆಕ್ಷರ್ ಯಾರು ಗೊತ್ತೆ?
 
ಗರುಡ ಗಮನ, ವೃಷಭ ವಾಹನ ಸಿನಿಮಾ ನಂತರ ರಾಜ್ ಬಿ ಶೆಟ್ಟಿ ಸಿನಿಮಾ ಮಾಡುತ್ತಿದ್ದು, ರಮ್ಯಾ ಮರಳುತ್ತಿರುವ ಸಿನಿಮಾದಲ್ಲೇ ರಾಜ್ ಬಿ ಶೆಟ್ಟಿ ಪ್ರಣಯ ಪ್ರಕಾರದ ಸಿನಿಮಾಗೆ ಮರಳಿದ್ದಾರೆ.

ಈ ಯೋಜನೆ ಸಿದ್ಧವಾಗಿದ್ದು ಹೇಗೆ ಎಂಬುದನ್ನು ರಮ್ಯಾ ವಿವರಿಸಿದ್ದಾರೆ. " ನಾನು ರಾಜಕಾರಣದಲ್ಲಿದ್ದರೂ ಸಿನಿಮಾ ಕುರಿತ ಆಸಕ್ತಿ ಮಾಸಿರಲಿಲ್ಲ. ಆಗ ಒಂದಷ್ಟು ಒಳ್ಳೆಯ ಸಿನಿಮಾಗಳಿಗೆ ಆಫರ್ ಕೂಡ ಬಂದಿದ್ದವು. ಆದರೆ ಅವುಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಿರಲಿಲ್ಲ. ಪುನೀತ್ ರಾಜ್ ಕುಮಾರ್- ಪವನ್ ಕುಮಾರ್ ಅವರ ದ್ವಿತ್ವ ಸಿನಿಮಾಗಾಗಿ ಹೊಂಬಾಳೆ ಫಿಲ್ಮ್ಸ್ ನಿಂದಲೂ ಆಫರ್ ಬಂದಿತ್ತು.
 
ಅಪ್ಪು ಅವರು ಕರೆ ಮಾಡಿ ಈ ಅದ್ಭುತ ಯೋಜನೆಯ ಬಗ್ಗೆ ಮಾತನಾಡಿದ್ದರು, ಆದರೆ ಅದು ಸಾಧ್ಯಾವಾಗಲಿಲ್ಲ. ಆದರೆ ನಾನು ಕಾರ್ತಿಕ್ ಗೌಡ ( ಹೊಂಬಾಳೆ ಫಿಲಂಸ್‌ನ ಕಾರ್ಯನಿರ್ವಾಹಕ ನಿರ್ಮಾಪಕ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಮುಖ್ಯಸ್ಥ) ನಾನು ಸಂಪರ್ಕದಲ್ಲಿದ್ದೆವು. ನನ್ನನ್ನು ಸಿನಿಮಾಗೆ ಮರಳುವಂತೆ ಒತ್ತಡ ಹಾಕುತ್ತಿದ್ದದ್ದು ಅವರೇ. ಸಿನಿಮಾದಲ್ಲಿ ಒಂದಷ್ಟು ಸಂಗತಿಗಳು ಹೇಗೆ ಬದಲಾವಣೆಯಾಗಿದೆ ಎಂಬುದನ್ನು ಅರಿತುಕೊಂಡೆ. ಆದರೆ ನಾಯಕ ನಟಿಯರಿಗೆ ಬರೆಯುವ ಪಾತ್ರಗಳು ಹಿಂದಿನಂತೆಯೇ ಇವೆ. ಅದರಿಂದ ಸ್ವಲ್ಪ ಬೇಸರವಾಯಿತು, ಸೂಕ್ತ ಯೋಜನೆಗಾಗಿ ಕಾಯಲು ನಿರ್ಧರಿಸಿದೆ. ಈ ನಡುವೆ ಜಿಜಿ.ವಿವಿ ಬಗ್ಗೆ ರಾಜ್ ಅವರೊಂದಿಗೆ ಮಾತನಾಡಿದ್ದೆ. ಅವರು ನನ್ನ ಸಿನಿಮಾಗಳ ಅಭಿಮಾನಿಯೂ ಆಗಿದ್ದರು ಹಾಗೂ ಅವರ ಮುಂದಿನ ಸಿನಿಮಾದ ಕಥೆಗೆ ನನ್ನ ರೀತಿಯ ನಟಿ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.  ಸ್ಕ್ರಿಪ್ಟ್ ಕೇಳಿದಾಗ, ಸಿನಿಮಾಗೆ ಮರಳುವುದಕ್ಕೆ ಸೂಕ್ತ ಯೋಜನೆ ಅನ್ನಿಸಿತು" ಎನ್ನುತಾರೆ ರಮ್ಯಾ.

ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಪ್ರಣಯ ಪ್ರಕಾರಕ್ಕಿಂತಲೂ ಹೆಚ್ಚಾಗಿ ಸಮಾಜದಲ್ಲಿ ಮಹಿಳೆಯ ಪಾತ್ರದ ಬಗ್ಗೆ ಹೆಚ್ಚು ಹೇಳುತ್ತದೆ. ಇದು ಪ್ರೀತಿಯ ಪರಿಕಲ್ಪನೆಯ ಮತ್ತು ಪ್ರಸ್ತುತ ಅದರ ರೂಪದಲ್ಲಿ ಬಹಳಷ್ಟು ಲೆಕ್ಕಾಚಾರಗಳು ಹೇಗೆ ಒಳಗೊಂಡಿವೆ ಎಂಬುದನ್ನು ಹೇಳುವ ಕಥೆಯಾಗಿದೆ. ನಾವು ಪ್ರೀತಿಯನ್ನು ವ್ಯಾಖ್ಯಾನಿಸಬಹುದೇ ಇಲ್ಲವೇ? ಎಂಬುದನ್ನು ಹೇಳುವ ಪ್ರಯತ್ನವಾಗಿದೆ. ಈ ಪರಿಕಲ್ಪನೆಯನ್ನು ರಾಜ್ ಮುಂದಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ಅವರ ವಿಷನ್ ನಲ್ಲಿ ನಾನು ಭಾಗಿಯಾಗಲು ಬಯಸಿದ್ದೇನೆ, ಈ ಯೋಜನೆ ಇನ್ನೂ ಸ್ಕ್ರಿಪ್ಟಿಂಗ್ ಹಂತದಲ್ಲಿದೆ ಸಿನಿಮಾ ತಂಡ ಇನ್ನುಳಿದ ಪಾತ್ರಗಳಿಗೆ ಕಲಾವಿದರನ್ನು ಅಂತಿಮಗೊಳಿಸುವ ಹಂತದಲ್ಲಿದೆ ಎಂದು ರಮ್ಯಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com