ಹುಟ್ಟುಹಬ್ಬದಂದೇ ನಟಿ ರಾಗಿಣಿ ದ್ವಿವೇದಿ ಹೊಸ ಸಿನಿಮಾ ಘೋಷಣೆ; ಸೆಬಾಸ್ಟಿಯನ್ ಡೇವಿಡ್ ನಿರ್ದೇಶನ
ನಟಿ ರಾಗಿಣಿ ದ್ವಿವೇದಿ ಅವರ ಕೈಯಲ್ಲಿ ನಿರ್ಮಾಣದ ವಿವಿಧ ಹಂತಗಳಲ್ಲಿರುವ ಹಲವಾರು ಚಿತ್ರಗಳಿದ್ದು, ಅವರು ಮತ್ತೊಂದು ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ. ರಾಗಿಣಿ ಐಪಿಎಸ್ ಚಿತ್ರದ ಸೀಕ್ವೆಲ್‌ನಲ್ಲಿ ಮತ್ತೆ ನಟಿ ರಾಗಿಣಿ ಅವರು ಕಾಣಿಸಿಕೊಳ್ಳುತ್ತಿದ್ದು, ಚಿತ್ರಕ್ಕೆ ರಾಗಿಣಿ IAS vs IPS ಎಂಬ ಶೀರ್ಷಿಕೆಯನ್ನಿಡಲಾಗಿದೆ.
ಮುಂಬರುವ ಈ ಚಿತ್ರವನ್ನು ಕೆ ಮಂಜು ಅವರು ತಮ್ಮ ಮಂಜು ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಮಾನ ಮತ್ತು ಧ್ವನಿ ಸಿನಿಮಾಗಳ ಮೂಲಕ ಹೆಸರುವಾಸಿಯಾಗಿರುವ ಸೆಬಾಸ್ಟಿಯನ್ ಡೇವಿಡ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶನದ ಹೊರತಾಗಿ ಅವರು ರಾಗಿಣಿ IAS vs IPS ಗೆ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ.
ಈ ನೂತನ ಸಿನಿಮಾವನ್ನು ರಾಗಿಣಿಯವರ ಹುಟ್ಟುಹಬ್ಬದಂದು (ಮೇ 24) ಘೋಷಿಸಲಾಯಿತು. ಪ್ರತಿಭಾವಂತ ತಾರಾಗಣ ಮತ್ತು ಸಿಬ್ಬಂದಿಯನ್ನು ಚಿತ್ರಕ್ಕೆ ಆಯ್ಕೆಮಾಡಲು ನಿರ್ಮಾಣ ತಂಡವು ಯೋಜಿಸಿದೆ ಮತ್ತು ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸುವ ಸಿದ್ಧತೆ ಮಾಡುತ್ತಿದೆ.
ರಾಗಿಣಿ ದ್ವಿವೇದಿ ಅವರು ವಿಶಾಲ್ ಶೇಖರ್ ನಿರ್ದೇಶನದ 'ಕರ್ವಾ 3' ಸಿನಿಮಾದ ತಾರಾಗಣವನ್ನು ಸೇರಲು ಸಿದ್ಧರಾಗಿದ್ದಾರೆ. ಇದರಲ್ಲಿ ತಿಲಕ್ ಶೇಖರ್ ಮತ್ತು ಮೇಘನಾ ಗಾಂವ್ಕರ್ ಕೂಡ ನಟಿಸಿದ್ದಾರೆ ಮತ್ತು ಚಿತ್ರೀಕರಣವು ಇನ್ನೂ ಪ್ರಾರಂಭವಾಗಬೇಕಿದೆ.

