ಘೋಸ್ಟ್: ಒಂದೇ ಟ್ರ್ಯಾಕ್‌ನಲ್ಲಿ ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಸಾಹಿತ್ಯ; ಸಿನಿಪ್ರಿಯರ ಮೆಚ್ಚುಗೆ

ಘೋಸ್ಟ್ ಚಿತ್ರದ ಒರಿಜಿನಲ್ ಗ್ಯಾಂಗ್‌ಸ್ಟರ್ ಮ್ಯೂಸಿಕ್ (OGM) ಶೀರ್ಷಿಕೆಯ ಮೊದಲ ಟ್ರ್ಯಾಕ್ ಅನ್ನು ಸೆ. 23ರಂದು ಬಿಡುಗಡೆ ಮಾಡಲಾಗಿದ್ದು, ಇದು ಟ್ರೆಂಡಿಂಗ್ ಆಗಿದೆ. ಒಜಿಎಂ ಬಹುಭಾಷಾ ಟ್ರ್ಯಾಕ್ ಆಗಿದ್ದು, ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿನ ಸಾಹಿತ್ಯವನ್ನು ಒಂದೇ ಟ್ರ್ಯಾಕ್‌ನಲ್ಲಿ ಸಂಯೋಜಿಸಲಾಗಿದೆ.
ಘೋಸ್ಟ್ ಸಿನಿಮಾದಲ್ಲಿ ನಟ ಶಿವರಾಜ್‌ಕುಮಾರ್
ಘೋಸ್ಟ್ ಸಿನಿಮಾದಲ್ಲಿ ನಟ ಶಿವರಾಜ್‌ಕುಮಾರ್

ನಿರ್ದೇಶಕ ಶ್ರೀನಿ ಮತ್ತು ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಶಿವರಾಜಕುಮಾರ್ ಅವರ ಮುಂಬರುವ ಚಿತ್ರ 'ಘೋಸ್ಟ್' ಚಿತ್ರಕ್ಕೆ ಅಂದುಕೊಂಡಂತೆ ಕೆಲಸ ಮಾಡಿ ಮುಗಿಸಿದ್ದಾರೆ. ಒರಿಜಿನಲ್ ಗ್ಯಾಂಗ್‌ಸ್ಟರ್ ಮ್ಯೂಸಿಕ್ (OGM) ಶೀರ್ಷಿಕೆಯ ಮೊದಲ ಟ್ರ್ಯಾಕ್ ಅನ್ನು ಸೆಪ್ಟೆಂಬರ್ 23ರಂದು ಬಿಡುಗಡೆ ಮಾಡಲಾಗಿದ್ದು, ಇದು ಟ್ರೆಂಡಿಂಗ್ ಆಗಿದೆ. ಒಜಿಎಂ ಬಹುಭಾಷಾ ಟ್ರ್ಯಾಕ್ ಆಗಿದ್ದು, ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿನ ಸಾಹಿತ್ಯವನ್ನು ಒಂದೇ ಟ್ರ್ಯಾಕ್‌ನಲ್ಲಿ ಸಂಯೋಜಿಸಲಾಗಿದೆ.

'ನಾವು ಈ ಹಿಂದೆ ಸ್ಥಳೀಯ ಆಡುಭಾಷೆಗೆ ಆದ್ಯತೆ ನೀಡಿ, ಆಯಾ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಿದ್ದೇವೆ. ಆದರೆ, ಘೋಸ್ಟ್‌ ಸಿನಿಮಾದಲ್ಲಿ ನಾವು ಕೆಲವು ಭಾಷೆಗಳ ಸಾಹಿತ್ಯದ ಮಿಶ್ರಣದೊಂದಿಗೆ ಹಾಡೊಂದನ್ನು ಸಂಯೋಜಿಸಿದ್ದೇವೆ. ಅದನ್ನು ಎಲ್ಲಾ ಭಾಷೆಗಳಲ್ಲೂ ಒಂದೇ ಹಾಡಾಗಿ ಬಿಡುಗಡೆ ಮಾಡಿದ್ದೇವೆ. ಅದನ್ನು ಸಾರ್ವತ್ರಿಕ ಟ್ರ್ಯಾಕ್ ಆಗಿ ಮಾಡಿದ್ದೇವೆ' ಎಂದು ವಿವರಿಸುತ್ತಾರೆ ನಿರ್ದೇಶಕ ಶ್ರೀನಿ. 

'ನಾವು ಬಹು ಭಾಷೆಗಳಲ್ಲಿ ಡಬ್ ಮಾಡಿದ ಹಾಡುಗಳನ್ನು ಬಿಡುಗಡೆ ಮಾಡುವಾಗ, ಸ್ಥಳೀಯ ಭಾಷೆಗಳು ಮತ್ತು ಸಾಹಿತ್ಯದಲ್ಲಿನ ವ್ಯತ್ಯಾಸಗಳಿಂದ ಅವು ಕೆಲವೊಮ್ಮೆ ಉತ್ತಮವಾಗಿ ಮೂಡಿಬರುವುದಿಲ್ಲ. ಒಂದು ಸಾರ್ವತ್ರಿಕ ಹಾಡನ್ನು ರಚಿಸುವ ಮೂಲಕ, ಎಲ್ಲಾ ದಕ್ಷಿಣ ಭಾರತದ ಭಾಷೆಗಳನ್ನು ಒಂದೆಡೆ ಸೇರಿಸಲಾಗಿದೆ ಮತ್ತು ಆಯಾ ಭಾಷೆಗಳಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲಾಗಿದೆ' ಎಂದು ಹೇಳಿದರು.

ಚಿರಂಜೀವಿ ಕನ್ನಡದಲ್ಲಿ ಸಾಹಿತ್ಯ ಬರೆದಿದ್ದರೆ, ರಾಜೇಶ್ ಮಲಯಾಳಂನಲ್ಲಿ ಬರೆದಿದ್ದಾರೆ ಮತ್ತು ಎಂಜಿ ಚೇತನ್ ತಮಿಳು ಮತ್ತು ತೆಲುಗು ಆವೃತ್ತಿಗಳನ್ನು ನೋಡಿಕೊಂಡಿದ್ದಾರೆ. ಗಾಯಕರಾದ ಐಶ್ವರ್ಯಾ ರಂಗರಾಜನ್ ಮತ್ತು ಜಿತಿನ್ ರಾಜ್ ಅವರು ಹಾಡಿಗೆ ಧ್ವನಿಯಾಗಿದ್ದಾರೆ. ಇದು ದೃಶ್ಯಗಳು ಮತ್ತು ಪಾತ್ರಗಳೊಂದಿಗೆ ಸಿಂಕ್ ಮಾಡುವ ಮೂಲಕ ಸಿನಿಮೀಯ ಅನುಭವವನ್ನು ಹೆಚ್ಚಿಸುತ್ತದೆ. ಇದು ಉಳಿದ ಟ್ರ್ಯಾಕ್‌ಗಳಿಗೂ ಇರುತ್ತದೆ ಎಂದು ಶ್ರೀನಿ ಹೇಳುತ್ತಾರೆ.

ಸದ್ಯ, ವಿವಿಧ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಶಿವರಾಜಕುಮಾರ್, ಘೋಸ್ಟ್‌ ಸಿನಿಮಾದ ತಮ್ಮ ಭಾಗಗಳಿಗೆ ಡಬ್ಬಿಂಗ್ ಮಾಡುತ್ತಿದ್ದಾರೆ. ಸಂದೇಶ್ ಪ್ರೊಡಕ್ಷನ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಲಾದ ಬಹುಭಾಷಾ ಥ್ರಿಲ್ಲರ್ ಅನ್ನು ಡ್ಯುಯಾಲಜಿ ಎಂದು ಹೇಳಲಾಗಿದೆ. ಮೊದಲ ಭಾಗವು ಅಕ್ಟೋಬರ್ 19 ರಂದು ಬಿಡುಗಡೆಯಾಗುತ್ತದೆ. ಚಿತ್ರತಂಡ ಸೆಪ್ಟೆಂಬರ್ 30 ರಂದು ಟ್ರೇಲರ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ನಂತರ ದಸರಾ ಹಬ್ಬದ ಸಮಯದಲ್ಲಿ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ.

ಘೋಸ್ಟ್ ಸಿನಿಮಾದಲ್ಲಿ ಶಿವರಾಜಕುಮಾರ್ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ಬಾಲಿವುಡ್ ನಟ ಅನುಪಮ್ ಖೇರ್ ಮತ್ತು ನಟ ಜಯರಾಮ್ ಅವರು ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅರ್ಚನಾ ಜೋಯಿಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಘೋಸ್ಟ್ ಚಿತ್ರಕ್ಕೆ ಛಾಯಾಗ್ರಹಣವನ್ನು ಮಹೇಂದ್ರ ಸಿಂಹ ನಿರ್ವಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com