ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಶಿವರಾಜಕುಮಾರ್- ಕಿಶೋರ್
ತಮ್ಮ 125ನೇ ಚಿತ್ರವಾದ ವೇದಾ ಚಿತ್ರದ ಯಶಸ್ಸಿನ ಗುಂಗಿನಲ್ಲಿರುವ ನಟ ಶಿವರಾಜಕುಮಾರ್ ಅವರು ಶ್ರೀನಿ ಅವರ ಘೋಸ್ಟ್ ಮತ್ತು ನಿರ್ದೇಶಕ ಯೋಗರಾಜ್ ಭಟ್-ರಾಕ್‌ಲೈನ್ ವೆಂಕಟೇಶ್ ಅವರ ಕರಟಕ-ದಮನಕ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯದಲ್ಲೇ ಅರ್ಜುನ್ ಜನ್ಯ-ರಮೇಶ್ ರೆಡ್ಡಿ ಅವರ '45' ಸಿನಿಮಾ ಆರಂಭಿಸಲಿರುವ ಸೆಂಚುರಿ ಸ್ಟಾರ್ ಇದೀಗ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ. ಸೃಜನ್ ಲೋಕೇಶ್ ಅಭಿನಯದ 'ಎಲ್ಲಿದ್ದೇ ಇಲ್ಲಿ ತನಕ' ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ತೇಜಸ್ವಿ ಕೆ ನಾಗ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ಎಂದು ಬಿಂಬಿಸಲಾದ ಈ ಚಿತ್ರದಲ್ಲಿ ಶಿವಣ್ಣ ಹಿಂದೆಂದೂ ಕಾಣದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತೇಜಸ್ವಿ ಹಂಚಿಕೊಂಡಿದ್ದಾರೆ ಮತ್ತು ನಟನ ಪಾತ್ರದ ರೇಖಾಚಿತ್ರವು ಗಮನ ಸೆಳೆದಿದೆ.
ಈ ಹಿಂದೆ ಚಿರಂಜೀವಿ ಸರ್ಜಾ ಅವರ 'ಶಿವಾರ್ಜುನ' ಸಿನಿಮಾವನ್ನು ನಿರ್ಮಿಸಿದ್ದ ನಿಶ್ಚಿತ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಮಂಜುಳಾ ಶಿವಾರ್ಜುನ ಅವರ ಬೆಂಬಲದೊಂದಿಗೆ, ಈ ಚಿತ್ರದಲ್ಲಿ ಕಿಶೋರ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಯೋಜನೆಯು ಶಿವಣ್ಣ ಮತ್ತು ಕಿಶೋರ್ ನಡುವಿನ ಮೊದಲ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿದೆ.
ಇವರನ್ನು ಹೊರತುಪಡಿಸಿ, ಚಿತ್ರತಂಡ ಉಳಿದ ತಾರಾಗಣ ಮತ್ತು ತಂತ್ರಜ್ಞರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ. ಚಿತ್ರದ ಶೀರ್ಷಿಕೆ ಮತ್ತು ಅದರ ಶೂಟಿಂಗ್ ಯೋಜನೆಗಳ ವಿವರಗಳು ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ