ಸ್ಯಾಂಡಲ್‌ವುಡ್‌ನ ಗೋಲ್ಡನ್ ಸ್ಟಾರ್ ಗಣೇಶ್, ಸದ್ಯ ಪ್ರೀತಂ ಗುಬ್ಬಿ ಅವರ ಬಹು ನಿರೀಕ್ಷಿತ ಚಿತ್ರ 'ಬಾನದಾರಿಯಲ್ಲಿ' ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ ಮತ್ತು ನಟನ ಅಭಿಮಾನಿಗಳು ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ, ನಟ ಹಲವಾರು ನಿರ್ದೇಶಕರೊಂದಿಗೆ ಚರ್ಚೆಯಲ್ಲಿ ತೊಡಗಿರುವ ಬಗ್ಗೆ ವದಂತಿಗಳಿವೆ. ಮುಂಬರುವ ಚಿತ್ರಕ್ಕಾಗಿ ಗಣೇಶ್ ಅವರು ನಿರ್ದೇಶಕ ಶ್ರೀನಿವಾಸ್ ರಾಜು ಅವರೊಂದಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಶ್ರೀನಿವಾಸ್ ರಾಜು ಅವರ ರೋಮಾಂಚಕಕಾರಿ ಕಥಾಹಂದರದಲ್ಲಿ ನಟ ಗಣೇಶ್ ಆಸಕ್ತಿ ಹೊಂದಿದ್ದಾರೆ ಮತ್ತು ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಮನಾರ್ಹವಾಗಿ, ಅವರು ಇತರ ಸಿನಿಮಾಗಳನ್ನು ಬದಿಗಿಟ್ಟು ಈ ಚಿತ್ರಕ್ಕೆ ಆದ್ಯತೆ ನೀಡಿದ್ದಾರೆ ಮತ್ತು ಶೀಘ್ರದಲ್ಲೇ ಚಿತ್ರೀಕರಣವನ್ನು ಪ್ರಾರಂಭಿಸಲು ಯೋಜಿಸಿದ್ದಾರೆ. ಈ ನಟ-ನಿರ್ದೇಶಕರ ಸಹಯೋಗದ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಬಹಿರಂಗಪಡಿಸಲಾಗುವುದು ಎಂದು ತಿಳಿದುಬಂದಿದೆ.
ಗಣೇಶ್-ಶ್ರೀನಿವಾಸ್ ರಾಜು ಅವರ ಸಹಯೋಗವು ವಿಶಿಷ್ಟವಾದ ಸಂಯೋಜನೆಯನ್ನು ಮಾಡುತ್ತದೆ. ಗಣೇಶ್ ಅವರು ಮುಂಗಾರು ಮಳೆ ಪ್ರಕಾರದ ರೊಮ್ಯಾಂಟಿಕ್ ಚಿತ್ರಗಳು ಮತ್ತು ಕಮರ್ಷಿಯಲ್ ಎಂಟರ್ಟೈನರ್‌ಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ.
ಮತ್ತೊಂದೆಡೆ, ಶ್ರೀನಿವಾಸ್ ರಾಜು ತಮ್ಮ ದಂಡುಪಾಳ್ಯ ಸರಣಿಗಾಗಿ ಜನಮನ್ನಣೆ ಗಳಿಸಿದ್ದಾರೆ. ಗೋಲ್ಡನ್ ಸ್ಟಾರ್‌ಗಾಗಿ ನಿರ್ದೇಶಕರು ಯಾವ ರೀತಿಯ ಕಥೆಯನ್ನು ಸಿದ್ದಪಡಿಸಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
ಇದೇ ವೇಳೆ ನಿರ್ದೇಶಕ ಚೇತನ್ ಕುಮಾರ್ ಜೊತೆ ಗಣೇಶ್ ಕೈ ಜೋಡಿಸಲಿದ್ದಾರೆ ಎಂಬ ಊಹಾಪೋಹ ಕೂಡ ಇದೆ. ಅವರು ಸಿಂಪಲ್ ಸುನಿ ಅವರೊಂದಿಗೆ 'The Story of ರಾಯಗಢ' ಎಂಬ ಚಿತ್ರವನ್ನೂ ಹೊಂದಿದ್ದಾರೆ.
Advertisement