ರೆಬೆಲ್ ಸ್ಟಾರ್ ಅಂಬರೀಷ್ 71ನೇ ಹುಟ್ಟುಹಬ್ಬ: ಸಮಾಧಿ ಬಳಿ ಪುತ್ರನ ವಿವಾಹ ಆಮಂತ್ರಣ ಪತ್ರಿಕೆ ಇಟ್ಟು ಸುಮಲತಾ ಪೂಜೆ
ಇಂದು ಮೇ 29, ರೆಬೆಲ್ ಸ್ಟಾರ್, ರಾಜಕಾರಣಿ ಅಂಬರೀಷ್ ಅವರ 71ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರ ಪತ್ನಿ ಸಂಸದೆ ಸುಮಲತಾ ಅಂಬರೀಷ್ ಹಾಗೂ ಇತರ ಕುಟುಂಬ ಸದಸ್ಯರು, ಆಪ್ತರು, ಬಂಧುಗಳು ನಗರದ ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ಅಂಬರೀಷ್ ಸಮಾಧಿ ಬಳಿ ಬೆಳಗ್ಗೆಯೇ ತೆರಳಿ ಪೂಜೆ ಸಲ್ಲಿಸಿದರು.
Published: 29th May 2023 02:56 PM | Last Updated: 29th May 2023 03:24 PM | A+A A-

ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ
ಬೆಂಗಳೂರು: ಇಂದು ಮೇ 29, ರೆಬೆಲ್ ಸ್ಟಾರ್, ರಾಜಕಾರಣಿ ಅಂಬರೀಷ್ ಅವರ 71ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರ ಪತ್ನಿ ಸಂಸದೆ ಸುಮಲತಾ ಅಂಬರೀಷ್ ಹಾಗೂ ಇತರ ಕುಟುಂಬ ಸದಸ್ಯರು, ಆಪ್ತರು, ಬಂಧುಗಳು ನಗರದ ಕಂಠೀರವ ಸ್ಟುಡಿಯೊ ಆವರಣದಲ್ಲಿರುವ ಅಂಬರೀಷ್ ಸಮಾಧಿ ಬಳಿ ಬೆಳಗ್ಗೆಯೇ ತೆರಳಿ ಪೂಜೆ ಸಲ್ಲಿಸಿದರು.
ಇನ್ನೊಂದು ವಾರದಲ್ಲಿ ಅಂಬರೀಷ್ ಪುತ್ರ ಅಭಿಷೇಕ್ ವಿವಾಹ ಸಮಾರಂಭವಿದ್ದು ಮದುವೆಯ ಆಮಂತ್ರಣ ಪತ್ರಿಕೆಯನ್ನು ಅಂಬಿ ಸಮಾಧಿ ಮುಂದೆ ಸುಮಲತಾ ಇಟ್ಟು ಪೂಜೆ ಸಲ್ಲಿಸಿ ತಮ್ಮ ಪತಿಯನ್ನು ಸ್ಮರಿಸಿಕೊಂಡರು. ನಂತರ ಸಮಾಧಿ ಬಳಿ ನೆರೆದಿದ್ದ ಅಂಬಿ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನೆರವೇರಿಸಿದರು.
ಈ ಮೂಲಕ ಮಂಡ್ಯದ ಗಂಡಿನ ಹುಟ್ಟುಹಬ್ಬವನ್ನು ಮನೆಯವರು, ಗೆಳೆಯರು, ಆಪ್ತರು ಮತ್ತು ಅಭಿಮಾನಿಗಳು ಸೆಲೆಬ್ರೇಟ್ ಮಾಡಿದರು.
ಅಂಬಿ ಪುತ್ರನ ವಿವಾಹ: ಜೂನ್ 5ರಂದು ಅಭಿಷೇಕ್ ಅಂಬರೀಶ್ ಹಾಗೂ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಮಗಳ ಅವಿವಾ ಬಿಡಪ ವಿವಾಹ ನಡೆಯಲಿದೆ. ಕೆಲವು ದಿನಗಳಿಂದ ಮದುವೆ ಸಮಾರಂಭ ಭರ್ಜರಿಯಾಗಿ ನಡೆಯುತ್ತಿದೆ. ಸಮಲತಾ ಹಾಗೂ ಅಭಿಷೇಕ್ ಗಣ್ಯರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿ, ಮದುವೆಗೆ ಆಹ್ವಾನ ನೀಡುತ್ತಿದ್ದಾರೆ.
ಇದನ್ನೂ ಓದಿ: ಜತೆಗಿರದ ಜೀವ ಎಂದೆಂದಿಗೂ ಜೀವಂತ: ಅಂಬರೀಷ್ ಜನ್ಮದಿನದಂದು ಪತ್ನಿ ಸುಮಲತಾ ಭಾವುಕ ಪೋಸ್ಟ್
ಜೂನ್ 3ರಂದು ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಜೂನ್ 4ರಂದು ಚಪ್ಪರ ಕಾರ್ಯಕ್ರಮವಿರುತ್ತದೆ. ಜೂನ್ 5 ರಂದು ವಿವಾಹ ಜರುಗಲಿದ್ದು, ಕೇವಲ ಆತ್ಮೀಯರು ಹಾಗೂ ಕುಟುಂಬಸ್ಥರು ಭಾಗಿಯಾಗಲಿದ್ದಾರೆ.
ಜೂನ್ 7ರಂದು ಆರತಕ್ಷತೆ: ಜೂನ್ 7ರಂದು ಅಂಬರೀಶ್ ಕುಟುಂಬ ಕನ್ನಡ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಮುಖಂಡರಿಗಾಗಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ರಿಸೆಪ್ಷನ್‌ಗೆ ಎಲ್ಲಾ ಚಿತ್ರರಂಗದ ಅಂಬರೀಶ್, ಸುಮಲತಾ ಹಾಗೂ ಅಭಿಷೇಕ್ ಆಪ್ತರು ಆಗಮಿಸುವ ಸಾಧ್ಯತೆಯಿದೆ. ಸುಮಾರು 10 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಪಕ್ಕಾ ಸಸ್ಯಹಾರಿ ಖಾದ್ಯಗಳು ಇರಲಿವೆ.
ಜೂನ್ 16ರಂದು ಪ್ರಧಾನಿ ಮೋದಿ ಭಾಷಣ ಮಾಡಿದ್ದ ಮಂಡ್ಯದ ಗೆಜ್ಜಲಗೆರೆಯಲ್ಲಿ ಅಭಿಮಾನಿಗಳಿಗಾಗಿ ಅದ್ದೂರಿ ಬೀಗರ ಊಟವನ್ನು ಆಯೋಜನೆ ಮಾಡಲಾಗಿದೆ. ಇದು ಅಂಬಿ ಅಭಿಮಾನಿಗಳಿಗೆ ಏರ್ಪಡಿಸಲಾಗಿದ್ದು, 1 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ.