
'ರಿಯಲ್ ಸ್ಟಾರ್' ಉಪೇಂದ್ರ ನಿರ್ದೇಶನ ಹಾಗೂ ಅಭಿನಯದ ಬಹುನಿರೀಕ್ಷಿತ 'ಪ್ಯಾನ್ ಇಂಡಿಯಾ' ಸಿನಿಮಾ 'ಯುಐ' ಡಿ.20ರಂದು ಬಿಡುಗಡೆಯಾಗುತ್ತಿದ್ದು, 9 ವರ್ಷಗಳ ಬಳಿಕ ಉಪೇಂದ್ರ ಆ್ಯಕ್ಷನ್ ಕಟ್ ಹೇಳಿರುವ ಚಿತ್ರದ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಮೋಡಿ ಮಾಡಿರುವ ಚಿತ್ರ, ಇದೀಗ ‘ ವಾರ್ನರ್’ ಎಂಬ ವಿಡಿಯೋ ರಿಲೀಸ್ ಮಾಡಿ ಕುತೂಹಲ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಸಿನಿಮಾ ಕುರಿತು ಮಾತನಾಡಿರುವ ನಟ ಉಪೇಂದ್ರ ಅವರು, ಯುಐ ಚಲನಚಿತ್ರ ಕನ್ನಡ, ತೆಲುಗು, ಮಲಯಾಳಂ, ಹಿಂದಿ,ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವ ಬಗ್ಗೆ ಲೆಕ್ಕಾಚಾರ ಮಾಡಲಾಗುತ್ತಿದ್ದು, ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ಧತೆ ನಡೆಸುತ್ತಿ ದ್ದೇವೆ. ಯುಐ ಎಂದರೇನು? ಎಂಬ ಕುತೂಹಲವೇ ಹತ್ತಾರು ಯೋಚನೆ ಮೂಡಿಸಿದೆ. ಇದಕ್ಕೆ ಚಿತ್ರಮಂದಿರದಲ್ಲೇ ಉತ್ತರ ಸಿಗಲಿದೆ ಎಂದು ಹೇಳಿದರು.
ಇಂದಿನ ಒಟಿಟಿ, ಜಾಲತಾಣ ಸಹಿತ ಚಲನಚಿತ್ರ ವೀಕ್ಷಣೆಗೆ ಹಲವು ಮಾಧ್ಯಮ ಇದ್ದರೂ, ಉತ್ತಮ ವಿಷಯಾಧಾರಿತ ಚಲನಚಿತ್ರವನ್ನು ಪ್ರೇಕ್ಷಕರು ಎಂದೂ ಕೈ ಬಿಟ್ಟಿಲ್ಲ. ಅನೇಕ ಚಿತ್ರಗಳಿಗೆ ಪ್ರೇಕಕರ ಕೊರತೆ ಉಂಟಾಗಲು ಅನೇಕ ಕಾರಣಗಳಿವೆ. ಕೆಲವರಿಗೆ ಪ್ರಚಾರ ಮಾಡಲು ಆಗದೆ ಇರಬಹುದು. ಎಲ್ಲವನ್ನೂ ಬ್ಯಾಲೆನ್ಸ್ ಮಾಡುತ್ತಾ ಸಾಗಬೇಕು.
ಸ್ಮಾರ್ಟ್ ಫೋನ್ ಯುಗದಲ್ಲೀಗ ಮನರಂಜನೆ ಸುಲಭದಲ್ಲಿ ಸಿಗುತ್ತಿದೆ. ಇದಕ್ಕಿಂತ ಮೇಲ್ಮಟ್ಟದಲ್ಲಿ ಸಿನೆಮಾ ಇರಬೇಕು ಎನ್ನುವ ಪರಿಸ್ಥಿತಿ ಇದೆ. ಹಿಂದೆ ಚಿತ್ರರಂಗದಲ್ಲಿ ಗೋಲ್ಡನ್ ಎರಾ, ಸಿಲ್ವರ್ ಎರಾ ಅಂತ ಕರೆಯಲಾಗುತ್ತಿತ್ತು. ಅದೇ ಥರ ಒಂದೊಂದು ಎರಾ ಬಂದೇ ಬರುತ್ತದೆ.
ನಾನು ಚಲನಚಿತ್ರದಲ್ಲಿ ವಿಷಯಕ್ಕೆ ಆದ್ಯತೆ ನೀಡುತ್ತೇನೆ. ಎಐ ತಂತ್ರಜ್ಞಾನದ ಬಳಕೆಯನ್ನೂ ಯುಐನಲ್ಲಿ ಮಾಡಲಾಗಿದೆ. ಚಿತ್ರವನ್ನು ಸೂಕ್ಷ್ಮವಾಗಿ ವೀಕ್ಷಿಸಿದರೆ ಪ್ರೇಕ್ಷಕನಿಗೆ ಅದರಲ್ಲಿ ಒಂದೊಂದು ಪದರ ಕಾಣಬಹುದು. ಪ್ರೇಕ್ಷಕರಿಗೆ ಈ ಚಿತ್ರ ಎಷ್ಟು ಅರ್ಥ ಆಗುತ್ತೆ ಅನ್ನೋ ಕುತೂಹಲ ನನಗೂ ಇದೆ ಎಂದು ತಿಳಿಸಿದರು. ಇದೇ ವೇಳೆ ಯುಐ ನನ್ನ ಕಥೆಯಲ್ಲ, ನಮ್ಮ ಕಥೆ. ಚಿತ್ರದಲ್ಲಿನ ಪಾತ್ರ ನಮ್ಮೆಲ್ಲರನ್ನೂ ಪ್ರತಿಂಬಿಸುತ್ತದೆ ಎಂದರು.
ಬಳಿಕ ತಮ್ಮ ಮುಂದಿನ ಸಿನಿಮಾ ಹೇಗಿರಲಿದೆ ಎಂಬುದರ ಕುರಿತಂತೆಯೂ ಮಾತನಾಡಿದ ಉಪೇಂದ್ರ ಅವರು, ನನಗೆ ಮೊದಲಿನಿಂದಲೂ ಒಬ್ಬ ನಿರ್ದೇಶಕನಾಗಿ ಸಿನಿಮಾ ಈ ರೀತಿ ಮಾಡಬೇಕು ಎನ್ನುವ ಆಸೆ ಇದೆ. ಸಿನಿಮಾದ ಯಾವುದೇ ಒಂದು ಸೀನ್ ಅನ್ನೂ ಮೊದಲೇ ರಿವೀಲ್ ಮಾಡದೆ, ಡೈರೆಕ್ಟಾಗಿ ಸಿನಿಮಾ ರಿಲೀಸ್ ಮಾಡಿ ಹಿಟ್ ಮಾಡಬೇಕು ಎಂದುಕೊಂಡಿದ್ದೇನೆ. ಈ ಆಸೆಯನ್ನು ನಾನು ನನ್ನ ಮುಂದಿನ ಸಿನಿಮಾದಲ್ಲೇ ಮಾಡುತ್ತೇನೆಂದು ಹೇಳಿದರು.
ಇದೇ ವೇಳೆ ಈಗಿನ ಸಿನಿಮಾ ಟ್ರೆಂಡ್ ಬಗ್ಗೆಯೂ ಅವರು ತುಸು ಬೇಸರ ವ್ಯಕ್ತಪಡಿಸಿದರು. ಈಗೆಲ್ಲಾ ಕಥೆಯನ್ನು ಮೊದಲೇ ರಿವೀಲ್ ಮಾಡಲಾಗುತ್ತಿದೆ. ಟ್ರೇಲರ್, ಟೀಸರ್‌ನಲ್ಲೇ ಕೆಲವು ದೃಶ್ಯಗಳು ರಿಲೀಸ್‌ಗೂ ಮುನ್ನವೇ ಪ್ರೇಕ್ಷಕರಿಗೆ ಗೊತ್ತಾಗುತ್ತಿದೆ. ಹಾಗಾಗಿ ನನ್ನ ಮುಂದಿನ ಸಿನಿಮಾದಲ್ಲೇ ಈ ಪ್ರಯತ್ನ ಮಾಡುತ್ತೇನೆ. ಚಿತ್ರದ ಯಾವುದೇ ಒಂದು ಸೀನ್ ರಿವೀಲ್ ಮಾಡದೆ, ನೇರವಾಗಿ ಸಿನಿಮಾ ರಿಲೀಸ್ ಮಾಡಿ, ಅದನ್ನು ಹಿಟ್ ಮಾಡಿ ತೋರಿಸಬೇಕೆಂದು ಅಂದುಕೊಂಡಿದ್ದೇನೆಂದು ತಿಳಿಸಿದರು.
ಬಳಿಕ “ಕರಿಮಣಿ ಮಾಲೀಕ’ ಹಾಡು ಇತ್ತೀಚಿನ ದಿನಗಳಲ್ಲಿ ಮರಳಿ ಜನಪ್ರಿಯತೆ ಪಡೆದುಕೊಂಡಿದ್ದರ ಕುರಿತು ಮಾತನಾಡಿ, 15 ವರ್ಷ ಕಳೆದ ಮೇಲೆ ಈ ಹಾಡು ಜನರಿಗೆ ಅರ್ಥ ಆಯ್ತು ಎಂದು ಚಟಾಕಿ ಹಾರಿಸಿದರು.
ನಟ ಸುದೀಪ್ ಹೇಳಿಕೆಗೆ ಪ್ರತಿಕ್ರಿಯಿಸಿ ಸುದೀಪ್ ಶಿಷ್ಯ, ನಾನು ಗುರು ಹಾಗೇ ಇರಲಿ. ನಮ್ಮ ನಡುವೆ ಏನೂ ಇಲ್ಲ. ಅವರು ಹೇಳಿದ್ಮೇಲೆ ನಾನು ಏನು ಮಾತನಾಡೋದಿದೆ. ‘ಮ್ಯಾಕ್ಸ್’ ಮತ್ತು ‘ಯುಐ’ ಒಂದೇ ತಿಂಗಳಲ್ಲಿ ರಿಲೀಸ್ ಆಗುತ್ತಿದೆ. ಅದೆಷ್ಟೋ ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗಿ ಸಕ್ಸಸ್ ಕಂಡಿದ್ದು ಇದೆ. ಒಬ್ಬರಿಗೊಬ್ಬರು ಬೆಂಬಲ ನೀಡೋಣ. ಸುದೀಪ್ ಕೂಡ ನಮ್ಮ ಸಿನಿಮಾಗೆ ಟ್ವೀಟ್ ಮಾಡಿದ್ದಾರೆ. ಅವರಿಗೂ ಒಳ್ಳೆಯದಾಗಲಿ ಎಂದು ಹೇಳಿದರು.
ಬಳಿಕ ಯುಪಿ ಚಿತ್ರ ತೃಪ್ತಿ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಸಾಧು ಕೋಕಿಲಾ ಅವರು ನನಗೆ ಯಾವಾಲೂ ನಾನು ಅತೃಪ್ತ ನಿರ್ದೇಶ ಎಂದು ಹೇಳುತ್ತಿದ್ದರು. ನಿಜ, ನಾನು ಇನ್ನೂ ಏನಾದರೂ ಮಾಡಬೇಕೆಂಬ ಭಾವನೆ ಇಟ್ಟಿಕೊಂಡಿರುವವನು. ಎಡಿಟಿಂಗ್ ರೂಮ್‌ನಲ್ಲಿಯೂ ಸಾಕು ಸಾರ್ ಎಂದು ಶ್ರೀಕಾಂತ್ ಮತ್ತು ನವೀನ್ ಸೇರಿದಂತೆ ತಂಡ ನನ್ನನ್ನು ಹೊರಗೆ ಕಳುಹಿಸಿದ್ದೂ ಇದೆ. ಆದರೆ, ಪ್ರೇಕ್ಷಕರಿಗೆ ಸಂತೋಷ, ತೃಪ್ತಿ ತಂದರೆ ನನಗೂ ತೃಪ್ತಿ ಎಂದು ಹೇಳಿದರು.
2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದು, ಡಿ.20ಕ್ಕೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಉಪೇಂದ್ರ ಅವರಿಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.
Advertisement