
2019ರಲ್ಲಿ ತೆರೆಕಂಡ ಯಾನ ಚಿತ್ರದ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದ ನಟ ಸುಮುಖ 2022ರಲ್ಲಿ ಫಿಸಿಕ್ಸ್ ಟೀಚರ್ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಇದೀಗ ನಿರ್ದೇಶಕ ಯೋಗರಾಜ್ ಭಟ್ ಅವರ ಮನದ ಕಡಲು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಬಗ್ಗೆ ತೀವ್ರ ನಿರೀಕ್ಷೆ ಇಟ್ಟುಕೊಂಡಿರುವ ಅವರು, ಇದೊಂದು ಹೊಸ ಆರಂಭ ಮತ್ತು ಕಮರ್ಷಿಯಲ್ ಆಗಿ ಗುರುತಿಸಿಕೊಳ್ಳಲು ಮಹತ್ವದ ಹೆಜ್ಜೆಯಾಗಿದೆ ಎನ್ನುತ್ತಾರೆ.
'ನನ್ನ ಮೊದಲ ಎರಡು ಚಿತ್ರಗಳು ಪ್ರಯತ್ನವಾಗಿದ್ದವು. ಆರಂಭದಲ್ಲಿ ಕಮರ್ಷಿಯಲ್ ಆಗಿ ಗುರುತಿಸಿಕೊಳ್ಳಲು ನನಗೆ ಅವಕಾಶವಿರಲಿಲ್ಲ. ಆದರೆ, ಈ ಚಿತ್ರ ನನಗೆ ಆ ಅವಕಾಶವನ್ನು ನೀಡಿತು. ನಾನು ಆಡಿಷನ್ ನೀಡುವ ಮೂಲಕ ಆಯ್ಕೆಯಾದೆ. ಆದರೆ, ಇಂತಹ ದೊಡ್ಡ ಯೋಜನೆಯ ಭಾಗವಾಗುವೆ ಎಂದು ನಿರೀಕ್ಷಿಸಿರಲಿಲ್ಲ' ಎಂದು ಹೇಳುತ್ತಾರೆ ಸುಮುಖ.
ಮನದ ಕಡಲು ಚಿತ್ರದ ಭಾಗವಾಗಿರುವುದೇ ನನಗೆ ಸಿಕ್ಕ ದೊಡ್ಡ ಅವಕಾಶ. ಅದರಲ್ಲೂ ಬ್ಲಾಕ್ ಬಸ್ಟರ್ ಸಿನಿಮಾ ಮುಂಗಾರು ಮಳೆಯ ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ಇ ಕೃಷ್ಣಪ್ಪ ಅವರ ಜೊತೆಯಾಗಿರುವುದು ಮತ್ತೊಂದು ಗರಿಯಾಗಿದೆ. 18 ವರ್ಷಗಳ ನಂತರ ಇಬ್ಬರೂ ಮತ್ತೆ ಒಂದಾಗುತ್ತಿದ್ದು, ಈ ಚಿತ್ರದಲ್ಲಿ ನಟಿಸುತ್ತಿರುವ ಸುಮುಖ ಸಖತ್ ಥ್ರಿಲ್ ಆಗಿದ್ದಾರೆ. 'ಯೋಗರಾಜ್ ಭಟ್ ಅವರಿಗೆ ಮೊದಲಿಗೆ ನನ್ನ ಧ್ವನಿ ಮುಖ್ಯವಾಗಿತ್ತು. ನಂತರ ಆಡಿಷನ್ ನೀಡಿದೆ ಮತ್ತು ಆಯ್ಕೆಯೂ ಆದೆ' ಎಂದು ಅವರು ವಿವರಿಸುತ್ತಾರೆ.
ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಡಬ್ಬಿಂಗ್ ಕಾರ್ಯಗಳು ನಡೆಯುತ್ತಿವೆ. ಚಿತ್ರದಲ್ಲಿ ಕೆಲಸ ಮಾಡಿದ ಅನುಭವ ಹಂಚಿಕೊಳ್ಳುವ ಸುಮುಖ, 'ನನ್ನ ವೃತ್ತಿಜೀವನ ಆರಂಭಿಸಿ ಐದು ವರ್ಷ ಕಳೆದ ಬಳಿಕ ದೊಡ್ಡ ಅವಕಾಶ ಸಿಗುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ, ಇಷ್ಟು ಬೇಗ ಇಂತಹ ಚಿತ್ರ ಸಿಕ್ಕಿದೆ. ಇದು ನನಗೆ ಆಶ್ಚರ್ಯವನ್ನುಂಟುಮಾಡಿದೆ. ಅಭೂತಪೂರ್ವ ಸೆಟ್ ಮತ್ತು ಅನುಭವಿಗಳೊಂದಿಗೆ ಕೆಲಸ ಮಾಡುವುದು ಅತ್ಯುತ್ತಮವಾಗಿತ್ತು. ನಿರ್ದೇಶಕರು ನನ್ನನ್ನು ನಡೆಸಿಕೊಂಡ ರೀತಿಯಿಂದ ನಾನು ಬಹಳಷ್ಟು ಕಲಿತಿದ್ದೇನೆ. ಇದು ಅದ್ಭುತವಾದ ಕಲಿಕೆಯ ಅನುಭವವಾಗಿದೆ' ಎಂದರು.
ಮನದ ಕಡಲು ಚಿತ್ರವನ್ನು 2025ರ ಆರಂಭದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ನಾಯಕಿಯಾಗಿ ಚಿತ್ರದಲ್ಲಿ ಅಂಜಲಿ ಅನೀಶ್ ಮತ್ತು ರಶಿಕಾ ಶೆಟ್ಟಿ ನಟಿಸಿದ್ದಾರೆ. ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ.
Advertisement