
ಮನೋಜ್ ಪಿ ನಡಲುಮನೆ ನಿರ್ದೇಶನದ 'ನೀ ನಂಗೆ ಅಲ್ಲವಾ' ಚಿತ್ರಕ್ಕೆ ನಾಯಕಿಯಾಗಿ ನಟಿ ಕಾಶಿಮಾ ಆಯ್ಕೆಯಾಗಿದ್ದಾರೆ. ರಾಹುಲ್ ಅರ್ಕಾಟ್ ಅವರು ನಾಯಕರಾಗಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ನೀ ನಂಗೆ ಅಲ್ಲವಾ ಚಿತ್ರವನ್ನು ನಟ ಶ್ರೀಮುರಳಿ ಮತ್ತು ವಿದ್ಯಾ ಶ್ರೀಮುರಳಿ ಅವರು ಅರ್ಪಿಸುತ್ತಿದ್ದಾರೆ. ಈ ಹಿಂದೆ ಎಫ್3 ಪ್ರೊಡಕ್ಷನ್ಸ್ ಲಾಂಛನದಲ್ಲಿ ಸತೀಶ್ ನೀನಾಸಂ ನಟನೆಯ 'ಮ್ಯಾಟ್ನಿ' ಚಿತ್ರವನ್ನು ನಿರ್ಮಿಸಿದ್ದ ಎಸ್ ಪಾರ್ವತಿ ಗೌಡ, ಪವನ್ ಪರಶಿವಂ ಹಾಗೂ ಮನೋಹರ್ ಕಾಂಪಲ್ಲಿ ಈ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ರಾಹುಲ್ ಅವರಿಗೆ ಇದು ಚೊಚ್ಚಲ ಸಿನಿಮಾವಾಗಿದ್ದು, ಚಿತ್ರತಂಡ ಪೋಸ್ಟರ್ ಮೂಲಕ ನಾಯಕಿಯನ್ನು ಪರಿಚಯಿಸಿದೆ. ಚಿತ್ರಕ್ಕೆ ಸೂರಜ್ ಜೋಯಿಸ್ ಅವರ ಸಂಗೀತ ನಿರ್ದೇಶನವಿದೆ. ರಾಷ್ಟ್ರಪ್ರಶಸ್ತಿ ವಿಜೇಯ ನಾಗೇಂದ್ರ ಉಜ್ಜನಿ ಅವರ ಸಂಕಲನವಿದ್ದು, ಸಂಕ್ರಾಂತಿ ಹಬ್ಬದ ನಂತರ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
'ಸೌತ್ ಇಂಡಿಯನ್ ಹೀರೋ' ಚಿತ್ರದಲ್ಲಿನ ತಮ್ಮ ಅಭಿನಯದ ಮೂಲಕ ಹೆಸರುವಾಸಿಯಾದ ಕಾಶಿಮಾ ಸದ್ಯ 'ವಿಕ್ಟೋರಿಯಾ ಮ್ಯಾನ್ಷನ್' ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
Advertisement