ವಿದೇಶದಲ್ಲೂ ಅಬ್ಬರಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಸಿದ್ಧ; ಎಲ್ಲೆಲ್ಲಿ ಬಿಡುಗಡೆಯಾಗಲಿದೆ?

ಡಿ.29 ರಂದು ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಹವಾ ಸೃಷ್ಟಿಸುತ್ತಿದೆ. ಚಿತ್ರದ ಒಟ್ಟು ಕಲೆಕ್ಷನ್ ಮತ್ತು ಬೇಡಿಕೆ ಹೆಚ್ಚಾಗುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೆಚ್ಚುವರಿ ಪ್ರದರ್ಶನಗಳನ್ನು ಕಾಣುತ್ತಿದೆ. ಈ ಮಧ್ಯೆ, ಪ್ರೊಡಕ್ಷನ್ ಹೌಸ್ ದುಬೈನಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ.
ಕಾಟೇರ ಸಿನಿಮಾದ ಸ್ಟಿಲ್
ಕಾಟೇರ ಸಿನಿಮಾದ ಸ್ಟಿಲ್

ಡಿಸೆಂಬರ್ 29 ರಂದು ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಹವಾ ಸೃಷ್ಟಿಸುತ್ತಿದೆ. ಚಿತ್ರದ ಒಟ್ಟು ಕಲೆಕ್ಷನ್ ಮತ್ತು ಬೇಡಿಕೆ ಹೆಚ್ಚಾಗುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೆಚ್ಚುವರಿ ಪ್ರದರ್ಶನಗಳನ್ನು ಕಾಣುತ್ತಿದೆ.

ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ತರುಣ್ ಕಿಶೋರ್ ಸುಧೀರ್ ನಿರ್ದೇಶಿಸಿರುವ ಕಾಟೇರ ಸಿನಿಮಾ ಹೊಸ ವರ್ಷದ ಸಮಯದಲ್ಲಿ ಸಿನಿಪ್ರಿಯರನ್ನು ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. 

ತಮ್ಮ ಅಭಿಮಾನಿಗಳನ್ನು 'ಸೆಲೆಬ್ರಿಟಿಗಳು' ಎಂದು ಸಂಬೋಧಿಸಿದ ದರ್ಶನ್, ಚಿತ್ರದ ಯಶಸ್ಸಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ನಾಲ್ಕನೇ ದಿನಕ್ಕೆ ಚಿತ್ರ ಗಳಿಸಿದ್ದೆಷ್ಟು?

ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಕಾಟೇರ ಚಿತ್ರ ಬಿಡುಗಡೆಯಾದ ನಾಲ್ಕನೇ ದಿನಕ್ಕೆ ಗಲ್ಲಾಪೆಟ್ಟಿಗೆಯಲ್ಲಿ 18.26 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಕಾಟೇರ ಸಿನಿಮಾ ಮೊದಲನೇ ದಿನ 19.79 ಕೋಟಿ ರೂ. ಗಳಿಸಿತ್ತು. ಎರಡನೇ ದಿನ 17.35 ಕೋಟಿ ರೂ. ಗಳಿಸಿತ್ತು ಮತ್ತು ಮೂರನೇ ದಿನ ಬರೋಬ್ಬರಿ 20.94 ಕೋಟಿ ರೂ. ಸಂಗ್ರಹಿಸಿತ್ತು.  ಈ ಮೂಲಕ ಈವರೆಗೆ 77.6 ಕೋಟಿ ರೂಪಾಯಿಗಳನ್ನು ಗಳಿಸಿದೆ.

ಈಮಧ್ಯೆ, ಪ್ರೊಡಕ್ಷನ್ ಹೌಸ್ ದುಬೈನಲ್ಲಿ ಚಿತ್ರ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ. ಈ ಕುರಿತು ಮಾತನಾಡಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, 'ಭವ್ಯವಾದ ಕಾರ್ಯಕ್ರಮದೊಂದಿಗೆ ಕಾಟೇರ ಜ. 6 ರಂದು ದುಬೈನಲ್ಲಿ ಪ್ರೀಮಿಯರ್ ಆಗಲಿದೆ. 'ಕಾಟೇರ ಉತ್ಸವ'ದಲ್ಲಿ ಚಿತ್ರತಂಡ ಹಾಜರಿರಲಿದೆ' ಎಂದಿದ್ದಾರೆ. 

ಯಾವ ದೇಶಗಳಲ್ಲಿ ಕಾಟೇರ ರಿಲೀಸ್ ಆಗಲಿದೆ?

ಇದಲ್ಲದೆ, ಜರ್ಮನಿ, ಯುಕೆ, ಯುಎಸ್ಎ, ಕೆನಡಾ ಮತ್ತು ಐರ್ಲೆಂಡ್ ಸೇರಿದಂತೆ ಸುಮಾರು 9 ದೇಶಗಳಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಇದ್ದು, ಈ ಮೂಲಕ ಕನ್ನಡದ ಕಾಟೇರ ವಿದೇಶಗಳಲ್ಲೂ ಮಿಂಚು ಹರಿಸಲು ಸಿದ್ಧವಾಗಿದೆ. ಅಧಿಕೃತ ಚಿತ್ರ ಬಿಡುಗಡೆ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಪ್ರೊಡಕ್ಷನ್ ಹೌಸ್ ತಿಳಿಸಿದೆ.

ಕಾಟೇರ ಸಿನಿಮಾವನ್ನು ಡಬ್ ಮಾಡಿ ಶೀಘ್ರದಲ್ಲೇ ಬಹು ಭಾಷೆಗಳಲ್ಲಿ ಬಿಡುಗಡೆ ಮಾಡಲು ರಾಕ್‌ಲೈನ್ ವೆಂಕಟೇಶ್ ಯೋಜಿಸಿದ್ದಾರೆ. 

'ಇತ್ತೀಚೆಗೆ ಕಾಂತರ ಸಿನಿಮಾ ಮೊದಲಿಗೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿ, ನಂತರ ಇತರ ಭಾಷೆಗಳಿಗೆ ಡಬ್ ಆಗಿ ಅಲ್ಲಿಯೂ ಯಶಸ್ಸು ಗಳಿಸಿತ್ತು. ಅದರಂತೆ, ಕಾಟೇರ ಕೂಡ ವೈವಿಧ್ಯಮಯ ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಎನ್ನಲಾಗಿದೆ. ರೈತರನ್ನು ಕೇಂದ್ರಿಕರಿಸಿದ ನೈಜ ಘಟನೆಗಳನ್ನು ಆಧರಿಸಿದ ಚಿತ್ರವಾಗಿರುವುದರಿಂದ, ವಿವಿಧ ಭಾಷೆಗಳ ಡಬ್ಬಿಂಗ್ ಆವೃತ್ತಿಗಳಿಗೆ ಹೆಚ್ಚಿನ ಬೇಡಿಕೆಯಿದೆ' ಎಂದು ರಾಕ್‌ಲೈನ್ ವೆಂಕಟೇಶ್ ಹೇಳುತ್ತಾರೆ. 

ಜಡೇಶಾ ಕೆ ಹಂಪಿ ಜೊತೆಗೆ ತರುಣ್ ಸುಧೀರ್ ಕಥಾಹಂದರವಿರುವ ಈ ಚಿತ್ರದಲ್ಲಿ ಮಾಸ್ತಿ ಅವರ ಸಂಭಾಷಣೆಗಳು ಗಮನ ಸೆಳೆದಿವೆ. ಚಿತ್ರದಲ್ಲಿ ಮಾಲಾಶ್ರೀ ಅವರ ಪುತ್ರಿ ಆರಾಧನಾ, ಶೃತಿ, ವಿನೋದ್ ಆಳ್ವ, ಕುಮಾರ್ ಗೋವಿಂದ್, ಜಗಪತಿ ಬಾಬು, ಬಾಲ ಕಲಾವಿದ ರೋಹಿತ್ ಪಿವಿ, ಬಿರಾದಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತವಿದ್ದು, ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com