
ಬೆಂಗಳೂರು: ಸಾಮಾಜಿಕ ಜಾಲಣತಾಣಗಳಲ್ಲಿ ತಮ್ಮ ಮತ್ತು ಕುಟುಂಬದ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮತ್ತು ಸಂದೇಶ ಕಳುಹಿಸುತ್ತಿರುವವರ ವಿರುದ್ಧ ನಟ ಪ್ರಥಮ್ ಕಾನೂನು ಸಮರ ಸಾರಿದ್ದಾರೆ.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಅವರ ಸಹವರ್ತಿಗಳ ವಿರುದ್ಧದ ಹತ್ಯೆ ಆರೋಪದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಬೆದರಿಕೆ ಕರೆಗಳು ಹಾಗೂ ತಮ್ಮ ತಾಯಿ, ಪತ್ನಿಯ ಕುರಿತು ಅವಹೇಳನಕಾರಿ ಮೆಸೇಜ್, ಕಾಮೆಂಟ್ಸ್ ಮಾಡಲಾಗುತ್ತಿದೆ ಎಂದು ನಟ ಪ್ರಥಮ್ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕೆಲ ಅಂಧಾಭಿಮಾನಿಗಳಿಂದ ಹತ್ಯೆ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಪ್ರಥಮ್ ಅವರು, ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರನ್ವಯ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ನಟ ಪ್ರಥಮ್, ''ಅಂಧಾಭಿಮಾನಿಗಳೇ; ನಾನೆಷ್ಟು ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ!
ಮನೆಗೆ police notice ಬಂದ ಮೇಲೆ stationಗೆ ಬಂದಾಗ ನಾವು ಪ್ರಥಮ್ fan, ಯಾರೋ fake profile ಮಾಡಿಬಿಟ್ಟಿದ್ದಾರೆ ಅಂತ ಕಾಲಿಗೆ ಬೀಳ್ತೀರಾ; Social mediaದಲ್ಲಿ ಹಾರಾಡುವಾಗ ಇದ್ದ ಪೌರುಷ police stationಗೆ ಬಂದಾಗ ಯಾಕಿಲ್ಲ?ನೀವು ಬುದ್ಧಿ ಕಲಿಯಲ್ಲ; ಇನ್ಮೇಲೆ legal ಆಗಿ ಹೋಗ್ತೀನಿ'' ಎಂದು ಪ್ರಥಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಕೂಡ ಇದೇ ವಿಚಾರವಾಗಿ ನಟ ಪ್ರಥಮ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಹಿಂದೆ ಇದೇ ದರ್ಶನ್ ವಿಚಾರವಾಗಿ ಮಾತನಾಡಿದ್ದ ಪ್ರಥಮ್, ''ದರ್ಶನ್ ಅವರ ವಿಚಾರಣೆ ನಡೆಸಲಾಗುತ್ತಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸುತ್ತಿದ್ದ ಅಭಿಮಾನಿಗಳನ್ನು ಲಾಠಿ ತೆಗೆದುಕೊಂಡು ಹೊಡೆಯಬೇಕು ಅನಿಸುತ್ತದೆ ಎಂದು ಹೇಳಿದ್ದರು. ಇದು ದರ್ಶನ್ ಅವರ ಕೆಲ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
Advertisement