
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನ, ಅಭಿನಯದ ಕಾಂತಾರ ಚಿತ್ರದ ಪ್ರೀಕ್ವೆಲ್ ಚಿತ್ರ ಚಿತ್ರೀಕರಣ ಆರಂಭಕ್ಕೂ ಮುನ್ನವೇ ಭಾರಿ ಸದ್ದು ಮಾಡುತ್ತಿದ್ದು, ಶೂಟಿಂಗ್ ಆರಂಭಕ್ಕೂ ಮುನ್ನಲೇ ಚಿತ್ರದ ಒಟಿಟಿ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಅಮೇಜಾನ್ ಪ್ರೈಮ್ ಸಂಸ್ಥೆ ಟ್ವೀಟ್ ಮಾಡಿದ್ದು, ಮುಂಬೈಯಲ್ಲಿ ನಡೆದ ಅಮೇಜಾನ್ ಪ್ರೈಂನ ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಬಹಿರಂಗಪಡಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಅಮೇಜಾನ್ ಪ್ರೈಮ್ ಸಂಸ್ಥೆ, 'ಐಷಾರಾಮಿ ಆಸೆಗಳಿಗಿಂತ ದೊಡ್ಡ ವಿಪತ್ತು ಇನ್ನೊಂದಿಲ್ಲ. ಒಬ್ಬ ಕ್ಷುಲ್ಲಕ ರಾಜನಿಂದ ಉಂಟಾಗುವ ಇಂತಹ ವಿಪತ್ತು, ದೇವರು ಆಯ್ಕೆ ಮಾಡಿದ ಬುಡಕಟ್ಟು ನಾಯಕನ ಹೃದಯದಲ್ಲಿ ಕ್ರೋಧವನ್ನು ಪ್ರಚೋದಿಸುತ್ತದೆ. 'ಕಾಂತಾರ' ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಇಲ್ಲಿ ಪ್ರಸಾರವಾಗಲಿದೆ ಎಂದು ಪ್ರೈಂ ತನ್ನ ಸಾಮಾಜಿಕ ಜಾಲತಾಣ ಟ್ವಿಟರ್/ಎಕ್ಸ್‌ನಲ್ಲಿ ಬರೆದುಕೊಂಡಿದೆ.
ಅಂದಹಾಗೆ ‘ಕಾಂತಾರ ಒಂದು ದಂತಕಥೆʼ ಎಂದರೆ ಮೊದಲ ಭಾಗ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಇದೀಗ ಪ್ರೀಕ್ವೆಲ್ ರೈಟ್ಸ್ ಕೂಡ ಅಮೇಜಾನ್ ಪ್ರೈಂ ವಿಡಿಯೋ ಪಾಲಾಗಿದೆ.
ಚಿತ್ರ ಬಿಡುಗಡೆಯಾದ ಒಂದೂವರೆ ತಿಂಗಳ ಬಳಿಕ OTTಗೆ?
‘ಕಾಂತಾರ’ ಪ್ರೀಕ್ವೆಲ್ ಸಿನಿಮಾ ತೆರೆಕಂಡು ಒಂದೂವರೆ ತಿಂಗಳ ಬಳಿಕ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ʼಕಾಂತಾರʼ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಪ್ರೀಕ್ವೆಲ್ ಕೂಡ ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಕೆಲವು ದಿನಗಳ ಹಿಂದೆ ಹೊರ ಬಿದ್ದ ಫಸ್ಟ್ ಲುಕ್ ಪೋಸ್ಟರ್ ದೇಶದ ಗಮನ ಸೆಳೆದಿತ್ತು. ಇದನ್ನೂ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಲಿದ್ದು, ಅಂದಾಜು 125 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ.
ʼಕಾಂತಾರʼ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.
2022ರಲ್ಲಿ ತೆರೆಕಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದ ʼಕಾಂತಾರʼ ಚಿತ್ರದ ಪ್ರೀಕ್ವೆಲ್ (Kantara Movie)ಗೆ ಮುಹೂರ್ತ ನೆರವೇರಿದೆ. ರಿಷಬ್ ಶೆಟ್ಟಿ (Rishab Shetty) ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ದಾಖಲೆಯ ವೀಕ್ಷಣೆ ಕಂಡಿದೆ.
Advertisement