ಬೆಂಗಳೂರು: ಇತ್ತೀಚೆಗೆ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಡುಗಡೆಯಾಗಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ತೆಲುಗು ಚಿತ್ರ ಲವ್ ರೆಡ್ಡಿ (Love Reddy) ಇದೀಗ ಕನ್ನಡಕ್ಕೆ ಡಬ್ ಆಗಿದ್ದು, ಇದೇ ನವೆಂಬರ್ 22ರಂದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ.
ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿಯಲ್ಲಿ ನಡೆದ ನೈಜ ಘಟನೆಯಾಧಾರಿತ ಚಿತ್ರ ‘ಲವ್ ರೆಡ್ಡಿ’ ಸಿನಿಮಾ ತೆಲುಗಿನಲ್ಲಿ ಹಿಟ್ ಆಗಿತ್ತು. ಗಲ್ಲಾಪಟ್ಟೆಗೆಯಲ್ಲಿ ಸದ್ದು ಮಾಡಿದ್ದೂ ಅಲ್ಲದೇ ಸ್ಟಾರ್ ಸೆಲೆಬ್ರಿಟಿಗಳಿಂದ ಮೆಚ್ಚುಗೆ ಕೂಡ ಪಡೆದುಕೊಂಡಿತ್ತು.
ಲವ್ ರೆಡ್ಡಿ ಚಿತ್ರ ಯಾವ ಮಟ್ಟಿಗೆ ಪ್ರೇಕ್ಷಕರ ಮೇಲೆ ಪರಿಣಾಮ ಬೀರಿತ್ತು ಎಂದರೆ ಚಿತ್ರದ ಖಳನಾಯಕ ಕನ್ನಡದ ನಟ ಎನ್.ಟಿ. ರಾಮಸ್ವಾಮಿ ಅವರ ಮೇಲೆ ಚಿತ್ರಮಂದಿರದಲ್ಲೇ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದರು. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
ಇದೀಗ ಈ ಚಿತ್ರ ಕನ್ನಡಕ್ಕೆ ಡಬ್ ಆಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗಿದ್ದು, ಹೊಂಬಾಳೆ ಫಿಲ್ಸ್ಮ್ ಮೂಲಕ ಈ ಸಿನಿಮಾ ಕರ್ನಾಟಕದಲ್ಲಿ ನ.22ರಂದು ಬಿಡುಗಡೆ ಆಗಲಿದೆ. ಇತ್ತೀಚೆಗೆ ಚಿತ್ರದ ಕನ್ನಡ ವರ್ಷನ್ ಟ್ರೇಲರ್ ಬಿಡುಗಡೆಯಾಗಿದ್ದು, ನಟ ದುನಿಯಾ ವಿಜಯ್ ಅವರು ಈ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ‘ಲವ್ ರೆಡ್ಡಿ’ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
‘ಲವ್ ರೆಡ್ಡಿ’ ಸಿನಿಮಾಗೆ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬ ನಂಬಿಕೆ ಚಿತ್ರತಂಡಕ್ಕೆ ಇದೆ. ದುಬೈನಲ್ಲೂ ಈ ಸಿನಿಮಾವನ್ನು ಬಿಡುಗಡೆ ಮಾಡುವ ಕುರಿತು ಮಾತುಕಥೆ ನಡೆಸುವುದಾಗಿ ದುನಿಯಾ ವಿಜಯ್ ಭರವಸೆ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ನಟ ಅಂಜನ್ ರಾಮಚಂದ್ರ ಹಾಗೂ ನಟಿ ಶ್ರಾವಣಿ, 'ನಾವು ಕೂಡ ಕನ್ನಡವರೇ. ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿ’ ಎಂದು ಮನವಿ ಮಾಡಿದ್ದಾರೆ. 'ಆಂಧ್ರ ಮತ್ತು ಕರ್ನಾಟಕದ ಗಡಿಯಲ್ಲಿ ನಡೆದ ನೈಜ ಘಟನೆಯೇ ‘ಲವ್ ರೆಡ್ಡಿ’ ಸಿನಿಮಾದಲ್ಲಿ ಇದೆ. ಹಾಗಾಗಿ ಕನ್ನಡದ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಕನೆಕ್ಟ್ ಆಗಲಿದೆ.
ನಮಗೆ ಯಾವುದೇ ಫಿಲ್ಮಿ ಹಿನ್ನೆಲೆ ಇಲ್ಲ. ಅಂಜನ್ ರಾಮಚಂದ್ರ ನಮ್ಮ ಫ್ಯಾಮಿಲಿಯವರು. ಹೊಸಬರ ಸಿನಿಮಾವನ್ನು ನಿರ್ಮಾಣ ಮಾಡಲು ಯಾರೂ ಮುಂದೆ ಬರಲ್ಲ. ಹಾಗಾಗಿ ನಾವೆಲ್ಲ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದೇವೆ. ತೆಲುಗಿನಲ್ಲಿ ಜನ ಮೆಚ್ಚಿದ್ದಾರೆ' ಎಂದು ನಟ ಅಂಜನ್ ರಾಮಚಂದ್ರ ಹೇಳಿದ್ದಾರೆ.
ಲವ್ ರೆಡ್ಡಿ ಚಿತ್ರಕ್ಕೆ ಸ್ಮರಣ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ.
Advertisement