ಯುವ ನಿರ್ದೇಶಕ ಕಿಶೋರ್ ಮೂಡುಬಿದ್ರೆ ಆ್ಯಕ್ಷನ್- ಕಟ್ ಹೇಳುತ್ತಿರುವ ಹಾಗೂ ವಿಜಯ್ ರಾಘವೇಂದ್ರ ಅವರು ನಾಯಕನಾಗಿರುವ ರಿಪ್ಪನ್ಸ್ವಾಮಿ ಚಿತ್ರದಲ್ಲಿ ಅಶ್ವಿನಿ ಚಂದ್ರಶೇಖರ್ ಅವರು ನಟಿಸಿದ್ದು, ಈ ಮೂಲಕ ಸ್ಯಾಂಡಲ್ವುಡ್ಗೆ ಮತ್ತೆ ವಾಪಸ್ಸಾಗಿದ್ದಾರೆ.
ಚಿತ್ರದಲ್ಲಿ ಅಶ್ವಿನಿ ಚಂದ್ರಶೇಖರ್ ಅವರು ವೈದ್ಯೆ ಪಾತ್ರದಲ್ಲಿ ಹಾಗೂ ವಿಜಯ್ ರಾಘವೇಂದ್ರ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದು, ಚಿತ್ರತಂಡ ಚಿತ್ರದ ಫಸ್ಟ್ ಲುಕ್ ನ್ನು ಬಿಡುಗಡೆ ಮಾಡಿದೆ.
ಮೂಲತಃ ಶಿವಮೊಗ್ಗದ ಅಶ್ವಿನಿ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿ, ಪ್ರೇಮ ಪಲ್ಲಕ್ಕಿ ಚಿತ್ರದ ಮೂಲಕ 2015ರಲ್ಲಿ ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಬಳಿಕ ಒಂದು ರೊಮ್ಯಾಂಟಿಕ್ ಪ್ರೇಮಕತೆ’, ಆಕ್ಟೋಪಸ್ ಸೇರಿ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು, ಬಳಿಕ ಪರಭಾಷೆಗಳಲ್ಲಿ ಬಿಜಿಯಾದರು.
ತೆಲುಗಿನಲ್ಲಿ ಪ್ರೇಮ್ ಕಹಾನಿ, ಆವು ಪುಲಿ ಮಧ್ಯಲೋ ಪ್ರಭಾಸ್ ಪೆಳ್ಳಿ, ತಮಿಳಿನಲ್ಲಿ ಮೆರ್ಲಿನ್. ಪರಂಜು ಸೆಲ್ಲವ, ಕಾಲ್ ಟ್ಯಾಕ್ಸಿ. ಜಿವಿ 2 ಸೇರಿ ಮಲಯಾಳಂನಲ್ಲೂ ನಟಿಸುತ್ತಿದ್ದಾರೆ. ಹೀಗೆ ಕಳೆದ 7-8 ವರ್ಷಗಳಿಂದ ಪರಭಾಷೆಗಳಲ್ಲೇ ಬಿಜಿಯಾಗಿದ್ದ ಅಶ್ವಿನಿ, ಇದೀಗ ರಿಪ್ಪನ್ ಸ್ವಾಮಿ ಮೂಲಕ ಸ್ಯಾಂಡಲ್ವುಡ್ಗೆ ಕಮ್ಬ್ಯಾಕ್ ಆಗಿದ್ದಾರೆ.
ಕಿಶೋರ್ ಮೂಡುಬಿದ್ರೆ ನಿರ್ದೇಶನದ ಈ ಚಿತ್ರ ಪಂಚಾಂನನ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪೋಷಕ ಪಾತ್ರದಲ್ಲಿ ಪ್ರಕಾಶ್ ತೂಮಿನಾಡ್, ವಜ್ರಧೀರ್ ಜೈನ್, ಯಮುನಾ ಶ್ರೀನಿಧಿ, ಮೋಹನ್ ಶೇಣಿ ಮತ್ತು ಕೃಷ್ಣ ಮೂರ್ತಿ ಕವತಾರ್ ಕಾಣಿಸಿಕೊಂಡಿದ್ದಾರೆ.
ಚಿತ್ರದ ಚಿತ್ರೀಕರಣವು ಕೊಪ್ಪಳ, ಕಳಸ ಮತ್ತು ಬಾಳೆಹೊನ್ನೂರಿನಲ್ಲಿ 48 ದಿನಗಳಲ್ಲಿ ಪೂರ್ಣಗೊಳಿಸಿದ್ದು, ಚಿತ್ರಕ್ಕೆ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಯುಯೆಲ್ ಅಬಿ ಸಂಗೀತ ಸಂಯೋಜಿಸಿದ್ದಾರೆ. ರಂಗನಾಥ್ ಸಿಎಂ ಅವರು ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ.
Advertisement