
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನಿರೂಪಣೆಗೆ ನಟ ಸುದೀಪ್ ಅವರು ಗುಡ್ ಬೈ ಹೇಳುತ್ತಿದ್ದಂತೆಯೇ ಹಲವು ವದಂತಿಗಳು ಹರಡಿದ್ದು, ಈ ಗೊಂದಲಗಳಿಗೆ ಸ್ವತಃ ಸುದೀಪ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸುದೀಪ್ ಅವರು, ನಾನು ಇತ್ತೀಚೆಗೆ ಮಾಡಿದ ಟ್ವೀಟ್ ಬಗ್ಗೆ ನೀವೆಲ್ಲ ತೋರಿಸಿದ ಬೆಂಬಲ ಹಾಗೂ ಪ್ರೀತಿಯನ್ನು ಪ್ರಶಂಸಿಸುತ್ತೇನೆ. ಆದರೆ, ಚಾನೆಲ್ ಮತ್ತು ನನ್ನ ನಡುವೆ ಯಾವುದೇ ರೀತಿಯ ಗೊಂದಲ ಇರುವಂತೆ ಊಹಿಸಿ ಮಾತನಾಡುವುದನ್ನು, ವಿಡಿಯೋ ಮಾಡಿ ಮಾತನಾಡುವುದನ್ನು ದಯವಿಟ್ಟು ನಿಲ್ಲಿಸಿ. ನನ್ನ ಹಾಗೂ ಚಾನೆಲ್ ನಡುವೆ ಒಂದು ಸುದೀರ್ಘ ಪಾಸಿಟಿವ್ ಜರ್ನಿಯಿದೆ. ಈ ಪಯಣಕ್ಕೆ ʼಅಗೌರವʼವನ್ನು ಸೇರಿಸಿ ಮಾತನಾಡಬೇಡಿ ಎಂದು ಹೇಳಿದ್ದಾರೆ.
ನೀವೆಲ್ಲ ಊಹಿಸುತ್ತಿರುವ ವಿಚಾರ ಆಧಾರರಹಿತವಾಗಿದೆ. ನಾನು ಮಾಡಿರುವ ಟ್ವೀಟ್ ನೇರ ಮತ್ತು ಪ್ರಾಮಾಣಿಕವಾಗಿದೆ. ನನ್ನ ಹಾಗೂ ಕಲರ್ಸ್ ನಡುವಿನ ಬಾಂಧವ್ಯ ಅದ್ಭುತವಾಗಿದೆ. ನನ್ನನ್ನು ಅವರು ಯಾವಾಗಲೂ ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಕಾರ್ಯಕ್ರಮ ನಿರ್ದೇಶಕರಾಗಿರುವ ಪ್ರಕಾಶ್ ಅವರು ಒಬ್ಬ ಪ್ರತಿಭಾವಂತ ವ್ಯಕ್ತಿ. ನಾನು ಅವರ ಮೇಲೆ ತುಂಬಾ ಗೌರವವನ್ನು ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸು ವ್ಯಕ್ತಿ ನನ್ನಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಗೊಂದಲ ಹಾಗೂ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಜನರು ಎಲ್ಲಿಯವರೆಗೆ ಇಷ್ಟಪಡ್ತಾರೋ ಅಲ್ಲಿಯವರೆಗೆ ‘ಬಿಗ್ ಬಾಸ್’ ಶೋ ನಿರೂಪಣೆ ಮಾಡುತ್ತೇನೆಂದು ಎಂದು ಈ ಹಿಂದೆ ಕಿಚ್ಚ ಸುದೀಪ್ ಅವರು ಹೇಳಿದ್ದರು. ಆದರೆ, ಕೆಲ ದಿನಗಳ ಹಿಂದಷ್ಟೇ ಇದ್ದಕ್ಕಿದ್ದಂತೆಯೇ ಮುಂದಿನ ಸೀಸನ್ ನಿರೂಪಣೆ ಮಾಡೋದಿಲ್ಲ ಎಂದು ಟ್ವೀಟ್ ಮಾಡಿದ್ದರು.
ಸುದೀಪ್ ಅವರ ಈ ನಿರ್ಧಾರ ಕುರಿತು ಹಲವು ಅನುಮಾನಗಳು ಶುರುವಾಗಿದ್ದವು. ಈ ನಡುವೆ ‘ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿ’, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್'ವೊಂದನ್ನು ಹಂಚಿಕೊಂಡಿದ್ದರು.
ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುವ ಕೆಲವು ಕನ್ನಡ ದ್ರೋಹಿಗಳ ನಿಮ್ಮ ಕಿತ್ತೋದ್ ಆಟಕ್ಕೆ ಕಿಚ್ಚ ಸುದೀಪ್ ‘ಬಿಗ್ ಬಾಸ್’ ನಿರೂಪಕರಾಗಿ ನಿಲ್ಲಿಸಬೇಕಾಗಿದೆ. ಅವರಿಗೆ ಮಾಡಿದ ಅವಮಾನ ಸಹಿಸೋದಿಲ್ಲ. ಮುಂಬೈ ಮರಾಠಿ ಹಾಗೂ ತಮಿಳ್ ನಿರ್ದೇಶಕ ಮೊದಲು ಬಿಗ್ ಬಾಸ್ ಬಿಡಿ ಇಲ್ಲ ಬಿಗ್ ಬಾಸ್ ನಿಲ್ಲಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ವಿಡಿಯೋಗಳನ್ನು ಪೋಸ್ಟ್ ಮಾಡಿ, ಈ ಮೊದಲು ‘ಬಿಗ್ ಬಾಸ್’ನಲ್ಲಿ ಯಾರಾದರೂ ಇಂಗ್ಲಿಷ್ ಮಾತನಾಡಿದರೆ ಅದನ್ನು ಬಿಗ್ ಬಾಸ್ ಸಹಿಸುತ್ತಿರಲಿಲ್ಲ. ಆಗ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಹಾಕುತ್ತಿದ್ದರು. ಆದರೆ, ಈಗ ಈ ಪದ್ಧತಿ ಅಳಿದು ಹೋಗಿದೆ. ಇದಕ್ಕೆ ಬಿಗ್ ಬಾಸ್ ಆಯೋಜಕರೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನು ಸುದೀಪ್ ಖಂಡಿಸಿದ್ದಾರೆ. ‘ಹೆಚ್ಚು ಇಂಗ್ಲಿಷ್ ಬಳಕೆ ಮಾಡಿದಾಗ ಅದನ್ನು ಪ್ರಶ್ನೆ ಮಾಡಿ’ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಒಪ್ಪಿಲ್ಲ.
ಈ ಮೊದಲು ಸ್ವರ್ಗ ಹಾಗೂ ನರಕದ ಕಾನ್ಸೆಪ್ಟ್ ಇತ್ತು. ಸ್ವರ್ಗದ ಮಂದಿ ಹಾಯಾಗಿ ಕುಳಿತಿದ್ದರೆ ನರಕದವರು ನಿಂತೇ ಇದ್ದರು. ಹೀಗಾಗಿ, ಅವರಿಗೆ ಕೂರೂಕೆ ಅವಕಾಶ ಕೊಡಿ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಸೊಪ್ಪು ಹಾಕಿಲ್ಲ. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ. ಅಲ್ಲದೆ, ನರಕವಾಸಿಗಳಿಗೆ ಟಾಯ್ಲೆಟ್ ಬಳಕೆಗೆ ಯಾವುದೇ ಷರತ್ತುಗಳನ್ನು ಹಾಕದಂತೆಯೂ ಕೋರಿದ್ದರು. ಇದಾವುದಕ್ಕೂ ಆಯೋಜಕರು ಬೆಲೆ ಕೊಡದ ಹಿನ್ನೆಲೆಯಲ್ಲಿ ಮುಂದಿನ ಸೀಸನ್ ನಲ್ಲಿ ನಿರೂಪಣೆ ಮಾಡದಿರಲು ನಿರ್ಧರಿಸಿದ್ದಾರೆಂದು ಹೇಳಿದ್ದರು.
Advertisement