
ಬೆಂಗಳೂರು: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋದಿಂದ ಲಾಯರ್ ಜಗದೀಶ್ ಮತ್ತು ನಟ ರಂಜಿತ್ ಹೊರಬಂದಿದ್ದು, ಮನೆಯ ನಿಯಮ ಉಲ್ಲಂಘಿಸಿದ ಹಿನ್ನಲೆಯಲ್ಲಿ ಇಬ್ಬರನ್ನೂ ಮನೆಯಿಂದ ಹೊರದಬ್ಬಲಾಗಿದೆ ಎನ್ನಲಾಗಿದೆ.
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದು, ನಟ ಕಿಚ್ಚ ಸುದೀಪ್ ನಿರೂಪಣೆಯ ರಿಯಾಲಿಟಿ ಶೋದಲ್ಲಿ ಹೊಡೆದಾಡಿಕೊಂಡ ಹಿನ್ನೆಲೆಯಲ್ಲಿ ಜಗದೀಶ್ ಮತ್ತು ರಂಜಿತ್ ಇಬ್ಬರನ್ನೂ ಬಿಗ್‌ಬಾಸ್ ಮನೆಯಿಂದ ಹೊರ ಕಳುಹಿಸಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಮೂಲಗಳ ಪ್ರಕಾರ, ಬಿಗ್‌ಬಾಸ್ ಮನೆಯಲ್ಲಿ ನಿನ್ನೆಯಿಂದಲೂ ಸ್ಪರ್ಧಿಗಳ ಮಧ್ಯೆ ಅತಿರೇಕದ ಜಗಳ ನಡೆಯುತ್ತಿತ್ತು. ಜಗದೀಶ್, ಉಗ್ರಂ ಮಂಜು ಹಾಗೂ ರಂಜಿತ್ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ನಿನ್ನೆ ರಾತ್ರಿ ರಂಜಿತ್ ಮತ್ತು ಜಗದೀಶ್ ಹಾಗೂ ಉಗ್ರಂ ಮಂಜು ಮತ್ತು ಜಗದೀಶ್ ಮಧ್ಯೆ ಜೋರು ಗಲಾಟೆಯಾಗಿದೆ. ಬಿಗ್‌ಬಾಸ್ ಶೋ ಬಗ್ಗೆ ಜಗದೀಶ್ ಅವರು ಅವಾಚ್ಯವಾಗಿ ಮಾತನಾಡುತ್ತಿದ್ದು ಈ ಬಗ್ಗೆ ಎಲ್ಲಾ ಸ್ಪರ್ಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವಾಗ್ವಾದದ ಮಧ್ಯೆ ಮಾನಸ ವಿಚಾರವಾಗಿ ರಂಜಿತ್ ಮತ್ತು ಜಗದೀಶ್ ಮಧ್ಯೆ ಜಗಳವಾಗಿದ್ದು ಅತಿರೇಕದ ಹಂತಕ್ಕೆ ಹೋಗಿದೆ. ಇದಾದ ಮೇಲೆ ರಂಜಿತ್ ಮತ್ತು ಜಗದೀಶ್ ಇಬ್ಬರು ಕೈ ಕೈ ಮಿಲಾಯಿಸಿಕೊಂಡಿದ್ದು ಈ ವೇಳೆ ಬಿಗ್ ಬಾಸ್ ಮನೆಯಿಂದ ಅವರನ್ನು ಹೊರಹಾಕಲಾಗಿದೆ ಎನ್ನಲಾಗಿದೆ.
'ತುಟಿ ಪಿಟಿಕ್ ಎನ್ನಬಾರದು': ಸ್ಪರ್ಧಿಗಳ ವಿರುದ್ಧ ಬಿಗ್ ಬಾಸ್ ಗರಂ
ಇನ್ನು ನಿನ್ನೆಯ ಎಪಿಸೋಡ್ನಲ್ಲೂ ಗಲಾಟೆಯೇ ಹೈಲೈಟ್ಸ್ ಆಗಿತ್ತು. ಇಂದು ಬೆಳ್ಳಂಬೆಳಗ್ಗೆ ಕಲರ್ಸ್ ಕನ್ನಡ ಪ್ರೋಮೋ ರಿಲೀಸ್ ಮಾಡಿತ್ತು. ಅದರಲ್ಲಿ ಸ್ಪರ್ಧಿಗಳ ಗಲಾಟೆಗೆ ಸಂಬಂಧಿಸಿದ್ದಾಗಿತ್ತು. ಈ ವೇಳೆ ಬಿಗ್‌ಬಾಸ್ ತುಂಬಾ ಗರಂ ಆಗಿರೋದು ಕಂಡು ಬಂದಿತ್ತು. ಲಾಯರ್ ಜಗದೀಶ್ ವಿರುದ್ಧ ಕೆಲ ಸ್ಪರ್ಧಿಗ ತಿರುಗಿ ಬಿದ್ದಿದ್ದು ಈ ವೇಳೆ ಒಬ್ಬರನೊಬ್ಬರು ಏಕವಚನದಲ್ಲೇ ಬೈದಾಡಿಕೊಂಡಿದ್ದರು.
ಕ್ಯಾಪ್ಟನ್ ಶಿಶಿರ್ ಅವರು ತಮ್ಮ ಮೊದಲ ನಾಮಿನೇಷನ್ ಧರ್ಮ ಅವರು ಎಂದು ಹೇಳುತ್ತಾರೆ. ಇದಕ್ಕೆ ಲಾಯರ್ ಜಗದೀಶ್ ಅವರು ನೀವು ಅವರನ್ನು ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ನನಗನಿಸುತ್ತಿದೆ ಎಂದಿದ್ದಾರೆ. ಈ ವೇಳೆ ಮಾನಸ ಎಲ್ಲದಕ್ಕೂ ಬಾಯಿ ಹಾಕುತ್ತಿರಲ್ಲ ಎಂದು ಜಗದೀಶ್ ಅವರಿಗೆ ಆವಾಜ್ ಹಾಕಿದ್ದಾರೆ. ಆಗ ಮನೆ ಮಂದಿಯೆಲ್ಲ ಎದ್ದು ಜಗಳಕ್ಕೆ ನಿಂತಿದ್ದಾರೆ.
'ನಾಮಿನೇಟ್ ಆದವರೇ ಸುಮ್ಮನಿದ್ದಾರೆ, ನಿಂದೇನೊಲೇ'
ಈ ವೇಳೆ ಮಧ್ಯ ಪ್ರವೇಶಿಸಿದ ಮತ್ತೋರ್ವ ಸ್ಪರ್ಧಿ ತ್ರಿವಿಕ್ರಮ್, 'ನಾಮಿನೇಟ್ ಆದವರೇ ಸುಮ್ಮನೆ ಇದ್ದಾರೆ, ನಿಂದೇನು ಲೇ.. ಎಂದಿದ್ದಾರೆ. ಈ ವೇಳೆ ಉಗ್ರಂ ಮಂಜು ಬಂದು ಥೂ ನಿನ್ನ ಯೋಗ್ಯತೆಗೆ, ಹೋಗಲೇ..ಎಂದು ಕಿಡಿಕಾರಿದ್ದಾರೆ. ಈ ರೀತಿ ಹೇಳುವಾಗ ಜಗದೀಶ್ ಹಾಗೂ ಮಂಜು ಇಬ್ಬರು ಫೇಸ್ ಟು ಫೇಸ್ ಇದ್ದರು. ಇದೇ ವೇಳೆ ಬಿಗ್ ಬಾಸ್ ಎಂಟ್ರಿಯಾಗಿದ್ದು ಈ ಕೂಡಲೇ ಸೋಫಾದಲ್ಲಿ ಕುಳಿತುಕೊಳ್ಳಿ ಎಂದು ಹೇಳಿದ್ದಾರೆ. ಹೀಗೆ ಹೇಳುವಾಗಲೂ ಸ್ಪರ್ಧಿಗಳೆಲ್ಲ ಗುಂಪಾಗಿಯೇ ಇದ್ದರು. ಆದರೆ ಬಿಗ್‌ಬಾಸ್ ತುಂಬಾ ಗರಂ ಆದಂತೆ ಕಂಡು ಬಂದಿದೆ. ಸಾಕು, ಯಾರೂ ತುಟಿ, ಪಿಟಿಕ್ ಅನ್ನೋ ಹಾಗಿಲ್ಲ ಎಂದು ಕೋಪದಿಂದ ಹೇಳಿದ್ದರು.
ಅಪ್ಪನಿಗೆ ಹುಟ್ಟಿದ್ರೆ ಎದುರುಗಡೆ ಬಾ ಎಂದಿದ್ದ ಚೈತ್ರಾ
ಸೋಮವಾರ ಚೈತ್ರಾ ಕುಂದಾಪುರ ಜೊತೆ ಜಗದೀಶ್ ಅವರು ಜಗಳ ಮಾಡಿದ್ದರು. ಸಿಟ್ಟಿಗೆದ್ದ ಚೈತ್ರಾ ಅವರು ಅಪ್ಪನಿಗೆ ಹುಟ್ಟಿದ್ರೆ ಎದುರುಗಡೆ ನಿಂತು ಮಾತನಾಡು ಎಂದು ಲಾಯರ್ ಜಗದೀಶ್ ಗೆ ಸವಾಲು ಹಾಕಿದ್ದರು. ಚೈತ್ರಾ, ಜಗದೀಶ್ ಕೆಂಗಣ್ಣಿನಿಂದ ಗುರಾಯಿಸಿದ್ದು, ಮನೆಯ ವಾತಾವರಣ ರಣರಂಗವಾಗುವಂತೆ ಮಾಡಿತ್ತು.
ಇದೇ ಮೊದಲಲ್ಲ!
ಬಿಗ್ ಬಾಸ್ ಮನೆಯಲ್ಲಿ ಈ ರೀತಿ ಸ್ಪರ್ಧಿಗಳು ಔಟ್ ಆಗಿರೋದು ಇದೇ ಮೊದಲಲ್ಲ. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಈ ಹಿಂದೆ ಹುಚ್ಚ ವೆಂಕಟ್‌ನನ್ನು ಶೋನಿಂದ ಎವಿಕ್ಷನ್ ಮಾಡಲಾಗಿತ್ತು. ಎರಡನೇ ಬಾರಿಗೆ ಕಿರಿಕ್ ಪಾರ್ಟಿ ಸಿನಿಮಾದ ನಟಿ ಸಂಯುಕ್ತ ಹೆಗೆಡೆ ಅವರನ್ನು ಹೊರ ಹಾಕಲಾಗಿತ್ತು. ಇದೀಗ ಲಾಯರ್ ಜಗದೀಶ್ ಮತ್ತು ನಟ ರಂಜಿತ್ ರನ್ನು ಶೋದಿಂದ ಹಾರಹಾಕಲಾಗಿದೆ ಎನ್ನಲಾಗಿದೆ.
Advertisement