
ಬೆಂಗಳೂರು: ಬಿಗ್‌ಬಾಸ್ ಮನೆಯಿಂದ ಹೊರಕ್ಕೆ ಬಂದಿರುವ ಲಾಯರ್ ಖ್ಯಾತಿಯ ಜಗದೀಶ್ ಅವರು ಅಕ್ಟೋಬರ್ 20ರಂದು ಅಂದರೆ ಇಂದು ಸಂಜೆ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ರದ್ದು ಮಾಡಿದ್ದಾರೆ.
ಈ ಹಿಂದೆ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ಬಳಿಕ ವಿಡಿಯೋ ಮಾಡಿದ್ದ ಜಗದೀಶ್ ಇಂದು ಸಂಜೆ ಸುದ್ದಿಗೋಷ್ಠಿ ನಡೆಸುವುದಾಗಿ ಹೇಳಿದ್ದರು. ಆದರೆ ನಟ ಹಾಗೂ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರ ತಾಯಿ ವಿಧಿವಶವಾಗಿರುವ ಕಾರಣ ತಮ್ಮ ಪತ್ರಿಕಾಗೋಷ್ಠಿಯನ್ನು ಅವರು ರದ್ದು ಮಾಡಿದ್ದಾರೆ. ಈ ಮಾಹಿತಿಯನ್ನು ಅವರು ಮತ್ತೊಂದು ವಿಡಿಯೊ ಮಾಡುವ ಮೂಲಕ ಬಹಿರಂಗ ಮಾಡಿದ್ದಾರೆ.
'ನನ್ನ ಪ್ರೆಸ್ ಮೀಟ್ ಮುಂದೂಡಿದ್ದೇನೆ. ದಾದಾ (ಸುದೀಪ್) ಅವರ ತಾಯಿಯ ನಿಧನ ಸಂತಾಪದ ನಡುವೆ ಈ ಸುದ್ದಿಗೋಷ್ಠಿ ನಡೆಸುವುದು ಸೂಕ್ತವಲ್ಲ ಎಂದು ಜಗದೀಶ್ ಹೇಳಿದ್ದಾರೆ.
ಸುದೀಪ್ ಅವರ ತಾಯಿ ಭಾನುವಾರ ಮುಂಜಾನೆ ಅನಾರೋಗ್ಯದ ಕಾರಣ ನಿಧನ ಹೊಂದಿದ್ದಾರೆ. ವಯೋಸಹಜ ಸಮಸ್ಯೆಯಿಂದಾಗಿ ಅವರು ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸುದ್ದಿ ಪ್ರಕಟಗೊಂಡ ಬಳಿಕ ಲಾಯರ್ ಜಗದೀಶ್ ಅವರು ವಿಡಿಯೊ ಬಿಡುಗಡೆ ಮಾಡಿದ್ದಾರೆ.
ಸುದೀಪ್ ಅವರ ತಾಯಿ ವಿಧಿವಶಗೊಂಡ ಕಾರಣ ನನ್ನ ಪ್ರೆಸ್ ಮೀಟ್ ಕ್ಯಾನ್ಸಲ್ ಆಗಿದೆ. ಸುದೀಪ್ ಅವರಿಗೆ ಮಾತೃ ವಿಯೋಗದಲ್ಲಿರುವುದ ನಮಗೆಲ್ಲರಿಗೂ ಬೇಸರದ ವಿಷಯ. ತಾಯಿಯ ಮಹತ್ವ ದೊಡ್ಡದು. ತಾಯಿಯನ್ನು ಕಳೆದುಕೊಳ್ಳುವ ಸಂದರ್ಭವನ್ನು ಹೇಳುವುದೇ ಕಷ್ಟ.
ನಾನು ಕೂಡ 2011ರಲ್ಲಿ ನನ್ನ ತಾಯಿಯನ್ನು ಕಳೆದುಕೊಂಡಿದ್ದೆ. ಈ ವೇಳೆ ಸಾಕಷ್ಟು ನೋವು ಅನುಭವಿಸಿದ್ದೆ. ಅಂತೆಯೇ ದಾದಾ (ಸುದೀಪ್) ಅವರ ತಾಯಿ ನಿಧನ ಹೊಂದಿರುವ ಹೊತ್ತಲ್ಲಿ ಅವರ ಜತೆಗೆ ಇರಬೇಕಾಗಿದೆ ಎಂದು ಲಾಯರ್ ಜಗದೀಶ್ ಅವರು ವಿಡಿಯೊದಲ್ಲಿ ಹೇಳಿದ್ದಾರೆ.
ಗುಂಡಾಂಜನೇಯ ದೇವಸ್ಥಾನದ ಬಳಿ ಆಯೋಜನೆಯಾಗಿದ್ದ ಸುದ್ದಿಗೋಷ್ಠಿ
ಲಾಯರ್ ಕೆ.ಎನ್.ಜಗದೀಶ್ ಅವರು ಬೆಂಗಳೂರಿನ ಸಹಕಾರ ನಗರದಲ್ಲಿರುವ ಗುಂಡ ಆಂಜನೇಯ ದೇವಸ್ಥಾನದ ಬಳಿ ಸಂಜೆ 4.30 ರ ವೇಳೆಗೆ ಸುದ್ದಿಗೋಷ್ಠಿ ಮಾಡುವುದಾಗಿ ವಿಡಿಯೊದಲ್ಲಿ ಹೇಳಿಕೊಂಡಿದ್ದರು. ಹೊಸ ವಿಡಿಯೊದಲ್ಲಿ ಈ ಪ್ರೆಸ್‌ಮೀಟ್ ಕ್ಯಾನ್ಸಲ್ ಆಗಿದೆ ಎಂದು ಹೇಳಿದ್ದಾರೆ.
Advertisement