ಮದುವೆ ವದಂತಿ ಬಗ್ಗೆ ಕೊನೆಗೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಮೌನ ಮುರಿದಿದ್ದು, ಅಂತೆಕಂತೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಸ್ಪಷ್ಟನೆ ನೀಡಿರುವ ರಮ್ಯಾ ಅವರು, ಮಾಧ್ಯಮದವರೇ ನನಗೆ ಹಲವು ಬಾರಿ ಮದುವೆ ಮಾಡಿಸಿದ್ದಾರೆ. ಎಷ್ಟು ಬಾರಿ ಎಂಬುದರ ಲೆಕ್ಕವೇ ನನಗಿಲ್ಲ. ಒಂದು ವೇಳೆ ಮದುವೆಯಾದರೆ ನಾನೇ ಅದನ್ನು ನಿಮಗೆ ತಿಳಿಸುತ್ತೇವೆ. ಅನಧಿಕೃತ ಮೂಲಗಳಿಂದ ಬಂದ ವದಂತಿ ಹಬ್ಬಿಸುವುದನ್ನು ದಯವಿಟ್ಟು ನಿಲ್ಲಿಸಿ ಎಂದು ಬರೆದುಕೊಂಡಿದ್ದಾರೆ.
ಟೆಕ್ಸ್‌ಟೈಲ್ ಉದ್ಯಮಿಯೊಬ್ಬರ ಜೊತೆ ರಮ್ಯಾ ಅವರ ನಿಶ್ಚಿತಾರ್ಥ ಆಗಿದೆ ಎನ್ನುವ ಸುದ್ದಿ ವೈರಲ್ ಆಗಿದ್ದು, ನವೆಂಬರ್ ನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಲಿದೆ ಎನ್ನಲಾಗಿತ್ತು.
ರಮ್ಯಾ ಅವರು ಸದ್ಯಕ್ಕೆ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಉತ್ತರಕಾಂಡ’ ಸಿನಿಮಾದಲ್ಲಿ ಅವರು ಅಭಿನಯಿಸಬೇಕಿತ್ತು. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲೂ ಅವರು ನಟಿಸಿಬೇಕಿತ್ತು. ಕಾರಣಾಂತರಗಳಿಂದ ಅವರು ಆ ಪಾತ್ರಗಳನ್ನು ಅರ್ಧಕ್ಕೆ ಬಿಟ್ಟರು.
ರಮ್ಯಾ ಅವರಿಗೆ ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಅಭಿಮಾನಿಗಳು ಇದ್ದಾರೆ. ಮದುವೆಯ ಬಗ್ಗೆ ಗಾಸಿಪ್ ಕೇಳಿಬಂದಾಗ ಎಲ್ಲರಿಗೂ ಅಚ್ಚರಿ ಆಗಿತ್ತು. ಆದರೆ, ಇದೀಗ ರಮ್ಯಾ ಅವರೇ ಸ್ಪಷ್ಟನೆ ನೀಡಿದ್ದು, ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ
Advertisement