ನಿಂಗರಾಜು ನಿರ್ದೇಶನದ 'ಭಲೇ ಹುಡುಗ' ಚಿತ್ರದ ಚಿತ್ರೀಕರಣ ಅಕ್ಟೋಬರ್‌ನಲ್ಲಿ ಆರಂಭ
ಎಂ. ನಿಂಗರಾಜು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ “ಭಲೇ ಹುಡುಗ’ ಚಿತ್ರದ ಚಿತ್ರೀಕರಣ ಅಕ್ಟೋಬರ್ ನಲ್ಲಿ ಆರಂಭವಾಗಲಿದೆ.
ಚಿತ್ರದಲ್ಲಿ ನಿಂಗರಾಜು ಅವರ ಪುತ್ರ ಮಾಸ್ಟರ್ ಶರತನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸುವ ಹುಡುಗನ ಸುತ್ತ ಕಥೆ ಸಾಗುತ್ತದೆ.
ಅಕ್ಟೋಬರ್‌ನಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭಿಸಿ ಚಿತ್ರದುರ್ಗ, ಚಂದವಳ್ಳಿ, ನಂದಿ ಗಿರಿಧಾಮದ ಸುತ್ತಮುತ್ತ ಒಂದು ತಿಂಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಕೇವಲ 12 ವರ್ಷದ ಹುಡುಗನೊಬ್ಬ ತನ್ನ ಹಳ್ಳಿಯಲ್ಲಿ ನಡೆಯುತ್ತಿರುವ ಅರಾಜಕತೆಯ ವಿರುದ್ಧ ತಿರುಗಿ ಬೀಳುತ್ತಾನೆ. ಹಳ್ಳಿಯ ಜನರಲ್ಲಿ ಬೇರೂರಿದ್ದ ಮೂಢನಂಬಿಕೆಯ ಬಗ್ಗೆ ಅರಿವು ಮೂಡಿಸುತ್ತಾನೆ. ದುಶ್ಚಟಗಳಿಗೆ ದಾಸರಾದ ಹಳ್ಳಿಯ ಯುವಕರಲ್ಲಿ ಜಾಗೃತಿ ಮೂಡಿಸಿ, ಹಳ್ಳಿಗಾಗಿ ಹೇಗೆಲ್ಲಾ ಹೋರಾಡಿ, ಎಲ್ಲರಿಂದ ಭಲೇ ಹುಡುಗ ಅಂತನಿಸಿಕೊಳ್ಳುತ್ತಾನೆಂಬುದು ಚಿತ್ರದ ಕಥೆಯಾಗಿದೆ.
ಇದೊಂದು ಮಕ್ಕಳ ಸಾಹಸಮಯ ಚಿತ್ರವಾಗಿದ್ದು, ಅನಿರುದ್ಧ ಶಾಸ್ತ್ರಿ ಸಂಗೀತ, ಯೋಗರಾಜ್ ಭಟ್ ಸಾಹಿತ್ಯ, ಪ್ರಮೋದ್ ಭಾರತೀಯ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸವಿರಲಿದೆ.
ಚಿತ್ರಕ್ಕೆ ಮಾಸ್ಟರ್ ಶರತ್ ಜೊತೆ ಮಾಸ್ಟರ್ ಘನಶ್ಯಾಮ್, ಬೇಬಿ ಜಯಲಲಿತಾ, ಮಾಸ್ಟರ್ ಅಂಜನ್, ಬಲರಾಂ, ಎಂವಿ ಸಮಯ್, ಜ್ಯೋತಿ ಮರೂರ್, ಡಾ. ಈಶ್ವರ್ ನಾಗನಾಥ್ ತಾರಾಗಣವಿದೆ.


