ಹೈದರಾಬಾದ್: ಜೂ.ಎನ್ ಟಿಆರ್ ಮತ್ತು ಜಾಹ್ಮವಿ ಕಪೂರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ದೇವರಾ ಭಾಗ-1 ಚಿತ್ರ ಇಂದು ತೆರೆ ಕಂಡಿದ್ದು, ಹೈದರಾಬಾದ್ ನ ಸುದರ್ಶನ್ ಚಿತ್ರ ಮಂದಿರದಲ್ಲಿ ನಿರ್ಮಿಸಲಾಗಿದ್ದ ಜೂ.ಎನ್ ಟಿಆರ್ ಕಟೌಟ್ ಬೆಂಕಿಗಾಹುತಿಯಾಗಿದೆ.
ಹೌದು...ತೆಲುಗು ನಟ ಹಾಗೂ ಜೂ.ಎನ್ ಟಿಆರ್ ಅವರ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಅವರ ಎನ್‌ಟಿಆರ್ ಆರ್ಟ್ಸ್ ನಿರ್ಮಾಣದ ಮತ್ತು ಖ್ಯಾತ ನಿರ್ದೇಶಕ ಕೊರಟಾಲ ಶಿವ ನಿರ್ದೇಶನದ ದೇವರ ಚಿತ್ರ ಇಂದು ತೆರೆಕಂಡಿದ್ದು, ನಿರೀಕ್ಷೆಯಂತೆಯೇ ಬಹುದೊಡ್ಡ ಓಪನಿಂಗ್ಸ್ ಪಡೆದುಕೊಂಡಿದೆ.
ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಿದ್ದು, ಭಾರೀ ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಇದನ್ನು ನಿರ್ಮಿಸಲಾಗಿದೆ. ಬಾಲಿವುಡ್ ಹೀರೋ ಸೈಫ್ ಅಲಿ ಖಾನ್ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ದು, ನಟರಾದ ಪ್ರಕಾಶ್ ರಾಜ್, ಶ್ರೀಕಾಂತ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರ ಬಿಡುಗಡೆಯಾದ ಥಿಯೇಟರ್ ಗಳಿಗೆ ಅಭಿಮಾನಿಗಳು ಸಾಗರೋಪಾದಿ ಹರಿದು ಬಂದಿದ್ದು, ಇಂದಿನ ಎಲ್ಲ ಶೋಗಳ ಟಿಕೆಟ್ ಗಳು ಸೋಲ್ಡೌಟ್ ಆಗಿವೆ. ಅಂತೆಯೇ ಚಿತ್ರಕೂಡ ಬಾಕ್ಸಾಫೀಸ್ ಹಿಟ್ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದರ ನಡುವೆಯೇ ದುರಂತವೊಂದು ಸಂಭವಿಸಿದೆ.
ಹೈದರಾಬಾದ್‌ನ ಸುದರ್ಶನ್ 35 ಎಂಎಂ ಥಿಯೇಟರ್‌ನಲ್ಲಿ ದೇವರ ಚಿತ್ರ ಬಿಡುಗಡೆಯಾಗಿದ್ದು, ಚಿತ್ರಮಂದಿರದ ಮುಂದೆ ನೆರೆದಿದ್ದ ಸಾವಿರಾರು ಎನ್‌ಟಿಆರ್ ಅಭಿಮಾನಿಗಳು ಚಿತ್ರ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ.
ಈ ವೇಳೆ ಚಿತ್ರಮಂದಿರದ ಮುಂದೆ ಜೂನಿಯರ್ ಎನ್ಟಿಆರ್ ಅವಪ ದೊಡ್ಡ ಕಟೌಟ್ ನಿಲ್ಲಿಸಲಾಗಿದ್ದು ಅದರ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ಈ ವೇಳೆ ಪಟಾಕಿಯ ಬೆಂಕಿಯ ಕಿಡಿ ಕಟೌಟ್ ಗೆ ತಗುಲಿದ್ದು, ಕ್ಷಣಮಾತ್ರದಲ್ಲಿ ಇಡೀ ಕಟೌಟ್ ಸುಟ್ಟು ಕರಕಲಾಗಿದೆ.
ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಆಗಬಹುದಾಗಿದ್ದ ದೊಡ್ಡ ಪ್ರಮಾದ ತಪ್ಪಿಸಿದ್ದಾರೆ.
Advertisement