
ಬೆಂಗಳೂರು: ಕನ್ನಡದ ಆ್ಯನಿಮೇಷನ್ ಸಿನಿಮಾ ಮಹಾವತಾರ ನರಸಿಂಹ ಚಿತ್ರ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರ್ಪಡೆಯಾಗಿದ್ದು, ಚಿತ್ರದ ಗಳಿಕೆ 105 ಕೋಟಿ ರೂಗಳಿಗೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಮಾಹಿತಿ ನೀಡಿದ್ದು, ಮಹಾವತಾರ ನರಸಿಂಹ ಇದೇ ಜುಲೈ 25 ಶುಕ್ರವಾರದಂದು ಬಿಡುಗಡೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಚಿತ್ರ ತನ್ನ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಬ್ಬರ ಆರ್ಭಟ ನಡೆಸುತ್ತಿದ್ದು, ಈಗಾಗಲೇ ಚಿತ್ರ ನೂರು ಕೋಟಿ ಕ್ಲಬ್ ಸೇರಿ, ಹಿಂದಿಯಲ್ಲಿ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರ್ಪಡೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಯಾವುದೇ ಸ್ಟಾರ್ ಕಲಾವಿದರು ಅಥವಾ ಬಹುದೊಡ್ಡ ಪಾತ್ರವರ್ಗವಿಲ್ಲದೆ ರಿಲೀಸ್ ಆದ ಈ ಚಿತ್ರವು ಇದೀಗ ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಅಶ್ವಿನ್ ಕುಮಾರ್ ನಿರ್ದೇಶನದ ಹಾಗೂ ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಿಸಿದ ಈ ಚಿತ್ರ ಬಿಡುಗಡೆಗೊಂಡು ಇಂದಿಗೆ 10 ದಿನಗಳನ್ನು ಪೂರೈಸಿದೆ.
ಭಾರತದ ಮೊಟ್ಟ ಮೊದಲ ಅನಿಮೇಷನ್ ಚಿತ್ರ
ಕೇವಲ 6 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಮಹಾವತಾರ ನರಸಿಂಹ, ಇಲ್ಲಿಯವರೆಗೆ ಜಾಗತಿಕವಾಗಿ 105 ಕೋಟಿ ರೂ. ಗಳಿಕೆಯನ್ನು ಕಂಡಿದೆ. ಆ ಮೂಲಕ 100 ಕೋಟಿ ರೂ. ಗಳಿಸಿದ ಮೊದಲ ಭಾರತೀಯ ಅನಿಮೇಷನ್ ಚಿತ್ರವಾಗಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಈ ಕಲೆಕ್ಷನ್ಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಹಿಂದಿಯಲ್ಲಿ ಬ್ಲಾಕ್ ಬಸ್ಟರ್
ಇನ್ನು ಮಹಾವತಾರ ನರಸಿಂಹ ಹಿಂದಿ ಆವೃತ್ತಿ ಬ್ಲಾಕ್‌ಬಸ್ಟರ್ ಪಟ್ಟಿಗೆ ಸೇರಿದ್ದು, ಈ ಚಿತ್ರ ಈಗಾಗಲೇ ಕಾಂತಾರ ದಾಖಲೆಗಳನ್ನು ಹಿಂದಿಕ್ಕಿದೆ. ವಾಸ್ತವವಾಗಿ ಮಹಾವತಾರ ನರಸಿಂಹ ಚಿತ್ರವು ಕಾಂತಾರ ಚಿತ್ರದ 4-ವಾರಗಳ ಒಟ್ಟು ಗಳಿಕೆ69.75 ಕೋಟಿರೂ ಗಳಿಕೆಯನ್ನು ಕೇವಲ 10 ದಿನಗಳಲ್ಲಿ ಸರಿಗಟ್ಟುವ ಸಾಧ್ಯತೆ ಇದೆ. ಹಿಂದೆ ಬೆಲ್ಟ್ ನಲ್ಲಿ ನರಸಿಂಹ ಚಿತ್ರ ಈವರೆಗೂ 65.64 ಕೋಟಿ ಗಳಿಕೆ ಕಂಡಿದೆ ಎಂದು ತರಣ್ ಆದರ್ಶ್ ಮಾಹಿತಿ ನೀಡಿದ್ದಾರೆ.
ಮಾತ್ರವಲ್ಲದೇ ಮಹಾವತಾರನರಸಿಂಹ ಚಿತ್ರ ಹಿಂದಿಯ ಸೈಯಾರಾ ಮತ್ತು ಹೊಸ ಬಿಡುಗಡೆ ಚಿತ್ರಗಳಾದ SOS2 ಮತ್ತು ಧಡಕ್2 ಸೇರಿದಂತೆ ಎಲ್ಲಾ ಚಿತ್ರಗಳ ಗಳಿಕೆ ಮೇಲೆ ಪರಿಣಾಮ ಬೀರಿದೆ. ಮಹಾವತಾರನರಸಿಂಹ 2ನೇ ವಾರಾಂತ್ಯದ ಶುಕ್ರವಾರ 5.30 ಕೋಟಿ, ಶನಿವಾರ 11.25 ಕೋಟಿ, ಭಾನುವಾರ 16.27 ಕೋಟಿ ಗಳಿಕೆಯೊಂದಿಗೆ ತನ್ನ ಒಟ್ಟಾರೆ ಗಳಿಕೆಯನ್ನು ಒಟ್ಟು 65.64 ಕೋಟಿ ರೂಗೆ ಏರಿಕೆ ಮಾಡಿಕೊಂಡಿದೆ.
100 ಕೋಟಿ ಕ್ಲಬ್ ಸೇರ್ಪಡೆ
ಇದೇ ವೇಳೆ ನರಸಿಂಹ ಚಿತ್ರ ಬಿಡುಗಡೆಯಾದ ಮೊದಲ ವಾರ 32.82 ಕೋಟಿ, 2ನೇ ವಾರ 32.82 ಕೋಟಿ ರೂಗಳ ಗಳಿಕೆ ಕಂಡಿತ್ತು. ಆ ಮೂಲಕ ಹಿಂದಿಯಲ್ಲಿ 65.64 ಕೋಟಿ ಗಳಿಕೆಯೊಂದಿಗೆ ಜಾಗತಿಕವಾಗಿ ನರಸಿಂಹ ಚಿತ್ರ ಒಟ್ಟು 105 ಕೋಟಿ ರೂಗಳ ಗಳಿಕೆ ಕಂಡಿದೆ ಎಂದು ಹೊಂಬಾಳೆ ಫಿಲ್ಮ್ಸ್ ಮಾಹಿತಿ ನೀಡಿದೆ.
Advertisement