
ಸ್ಟಾರ್ ನಟರು ಇಲ್ಲದೆಯೇ ಸಿನಿಮಾ ಗೆಲ್ಲುವುದಿಲ್ಲ ಎನ್ನುವ ಕಾರದಲ್ಲಿ ಯಾವುದೇ ಸ್ಟಾರ್ ನಟರು ಇಲ್ಲದೆಯೇ ಹೊಸಬರ ಸಿನಿಮಾ 'ಸು ಫ್ರಮ್ ಸೋ' ಇದೀಗ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಲೈಟರ್ ಬುದ್ಧ ಫಿಲ್ಮ್ಸ್ ಅಡಿಯಲ್ಲಿ ರಾಜ್ ಬಿ ಶೆಟ್ಟಿ ನಿರ್ಮಿಸಿ, ಜೆಪಿ ತುಮಿನಾಡ್ ನಿರ್ದೇಶಿಸಿದ 'ಸು ಫ್ರಮ್ ಸೋ' ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಎಬ್ಬಿಸಿದೆ. ದಿನದಿಂದ ದಿನಕ್ಕೆ ಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬಿಡುಗಡೆಯಾದ 10ನೇ ದಿನವೂ ಚಿತ್ರವು ಓಟವನ್ನು ಮುಂದುವರಿಸಿದ್ದು, ವಿಶ್ವದಾದ್ಯಂತ ಒಟ್ಟು ₹ 36 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಮತ್ತು BookMyShow ನಲ್ಲಿಯೇ 1 ಮಿಲಿಯನ್‌ಗಿಂತಲೂ ಹೆಚ್ಚು ಟಿಕೆಟ್ ಮಾರಾಟ ಕಂಡಿದೆ. ಈ ಚಿತ್ರಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಪ್ರೇಕ್ಷಕರು ಈಗಲೂ ಟಿಕೆಟ್‌ಗಳನ್ನು ಪಡೆಯಲು ಪರದಾಡುತ್ತಿದ್ದಾರೆ.
ರಾಜ್ ಬಿ ಶೆಟ್ಟಿ ಅವರೇ ಗುರುಜಿ ಪಾತ್ರದಲ್ಲಿ ಮತ್ತು ಜೆ ಪಿ ತುಮಿನಾಡ್ ನಟಿಸಿರುವ 'ಸು ಫ್ರಮ್ ಸೋ' ಚಿತ್ರದಲ್ಲಿ ಶನೀಲ್ ಗೌತಮ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜಿ, ಸಂಧ್ಯಾ ಅರಕೆರೆ ಮತ್ತು ಮೈಮ್ ಪ್ರಸಾದ್ ನಟಿಸಿದ್ದಾರೆ. ಚಿತ್ರಕ್ಕೆ ಸುಮೇಧ್ ಕೆ ಸಂಗೀತ ಸಂಯೋಜಿಸಿದ್ದಾರೆ.
ಎರಡನೇ ವಾರಕ್ಕೆ ಕಾಲಿಡುತ್ತಿರುವ ಸು ಫ್ರಮ್ ಸೋ ಚಿತ್ರವು ಶನಿವಾರ ₹5.20 ಕೋಟಿ ಗಳಿಕೆ ಕಂಡಿದೆ. ಇದು ಒಂದೇ ದಿನದ ಗರಿಷ್ಠ ಗಳಿಕೆಯಾಗಿದೆ. ಭಾನುವಾರ ಕೂಡ ಕರ್ನಾಟಕದಾದ್ಯಂತ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಬೋರ್ಡ್‌ಗಳು ಕಾಣಿಸಿಕೊಂಡಿವೆ. ಚಿತ್ರ ವೀಕ್ಷಿಸಲು ತೆರಳಿದ್ದವರು ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಹಗುರಾಗುತ್ತಿದ್ದಾರೆ.
ಬೆಂಗಳೂರಿನಲ್ಲಿ ಮೊದಲ ದಿನ ಕೇವಲ 100ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿತ್ತು. ಆದರೆ, ಇದೀಗ ಈ ಸಂಖ್ಯೆ 550ಕ್ಕೆ ಏರಿದೆ. ಮಂಗಳೂರಿನಲ್ಲಿ, ಚಿತ್ರವು ಪ್ರತಿದಿನ 70 ಕ್ಕೂ ಹೆಚ್ಚು ಪ್ರದರ್ಶನ ಕಾಣುತ್ತಿದೆ. ಮೈಸೂರಿನಲ್ಲಿ 55 ಕ್ಕೂ ಹೆಚ್ಚು, ಹುಬ್ಬಳ್ಳಿ, ಶಿವಮೊಗ್ಗ, ಮಣಿಪಾಲ ಮತ್ತು ಮುಂಬೈನಂತಹ ನಗರಗಳಲ್ಲಿ ತಲಾ 25ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಾಣುತ್ತಿದೆ.
ಆಗಸ್ಟ್ 1 ರಂದು ಮಲಯಾಳಂ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಕನ್ನಡ ಹಿಟ್‌ಗೆ ಹೊಸ ರೆಕ್ಕೆಗಳನ್ನು ನೀಡಿದೆ. ತೆಲುಗು ಡಬ್ಬಿಂಗ್ ಆವೃತ್ತಿ ಆಗಸ್ಟ್ 8 ರಂದು ತೆರೆಗೆ ಬರಲಿದೆ. ಇದನ್ನು ಮೈತ್ರಿ ಮೂವಿ ಮೇಕರ್ಸ್ ಬೆಂಬಲಿಸುತ್ತದೆ. ಈಮಧ್ಯೆ, ತಮಿಳು ರಿಮೇಕ್ ಕೂಡ ಬರಲಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದೆ.
Advertisement