

ಚೆನ್ನೈ: ನಂದಮೂರಿ ಬಾಲಕೃಷ್ಣ ಅಭಿನಯದ ಬಹು ನಿರೀಕ್ಷಿತ ಅಖಂಡ 2 ಚಿತ್ರಕ್ಕಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು ಚಿತ್ರ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಹೌದು.. ಅಖಂಡ 2 ಚಿತ್ರವನ್ನು ನಿರ್ಮಿಸಿದ್ದ 14 ರೀಲ್ಸ್ ಪ್ಲಸ್ ಎಂಟರ್ಟೈನ್ಮೆಂಟ್ ಮತ್ತು ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆಗಳ ನಡುವಿನ ವಿವಾದ ಕೊನೆಗೂ ಇತ್ಯರ್ಥವಾಗಿದ್ದು, ಇದೀಗ ನ್ಯಾಯಾಲಯದಿಂದ ‘ಅಖಂಡ 2’ ಬಿಡುಗಡೆಗೆ ಅನುಮತಿ ನೀಡಲಾಗಿದ್ದು, ಸಿನಿಮಾದ ಹೊಸ ಬಿಡುಗಡೆ ದಿನಾಂಕ ಘೋಷಿಸಲಾಗಿದೆ.
ನಟ ಬಾಲಕೃಷ್ಣ ಅಭಿನಯದ ಅಖಂಡ 2 ಚಿತ್ರ ಕಳೆದ ವಾರವೇ ಅಂದರೆ ಡಿಸೆಂಬರ್ 05 ಶುಕ್ರವಾರದಂದೇ ಬಿಡುಗಡೆ ಆಗಬೇಕಿತ್ತು. ಅಭಿಮಾನಿಗಳೂ ಕೂಡ ಚಿತ್ರ ಬಿಡುಗಡೆಗೆ ಸಕಲ ಸಿದ್ಧತೆ ನಡೆಸಿದ್ದರು. ಸಿನಿಮಾದ ಅಡ್ವಾನ್ಸ್ ಬುಕಿಂಗ್ ನಡೆದಿತ್ತು.
ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸಿನಿಮಾದ ಟಿಕೆಟ್ ದರ ಹೆಚ್ಚಳಕ್ಕೆ ಸರ್ಕಾರಗಳು ಅನುಮತಿ ಸಹ ನೀಡಿದ್ದವು. ಅಭಿಮಾನಿಗಳು ಸಹ ಚಿತ್ರಮಂದಿರಗಳನ್ನು ಸಿಂಗರಿಸಿ ಬಾಲಯ್ಯನ ಹೊಸ ಸಿನಿಮಾದ ಸ್ವಾಗತಕ್ಕೆ ಸಜ್ಜಾಗಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಸಿನಿಮಾದ ಬಿಡುಗಡೆಯನ್ನು ರದ್ದು ಮಾಡಲಾಗಿತ್ತು.
ವಿವಾದವೇನು? ಚಿತ್ರ ಬಿಡುಗಡೆ ಸ್ಥಗಿತವಾಗಿದ್ದೇಕೆ?
‘ಅಖಂಡ 2’ ಸಿನಿಮಾ ನಿರ್ಮಿಸಿದ್ದ 14 ರೀಲ್ಸ್ ಪ್ಲಸ್ ಎಂಟ ರ್ಟೈನ್ಮೆಂಟ್ ಸಂಸ್ಥೆಯ ಮೇಲೆ ಸುಮಾರು 10 ವರ್ಷಗಳ ಹಿಂದಿನ ಹಣಕಾಸು ವಿವಾದದ ಕುರಿತಾಗಿ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆಯು ದಾವೆ ಹೂಡಿತ್ತು. ಈ ಹಿಂದೆ ನಟ ಮಹೇಶ್ ಬಾಬು ಅಭಿನಯದ ನಂಬರ್ 1 ನೆನೊಕ್ಕಡಿನೇ ಮತ್ತು ಆಗಡು ಚಿತ್ರಗಳ ಒಪ್ಪಂದದ ಹಣವನ್ನು 14 ರೀಲ್ಸ್ ಪ್ಲಸ್ ಎಂಟ ರ್ಟೈನ್ಮೆಂಟ್ ಸಂಸ್ಥೆ ಬಾಕಿ ಉಳಿಸಿಕೊಂಡಿತ್ತು.
ಇಷ್ಟು ದಿನ ಸುಮ್ಮನಿದ್ದ ಎರೋಸ್ ಇಂಟರ್ನ್ಯಾಷನಲ್ ಸಂಸ್ಥೆ ಈಗ ಅಖಂಡ 2 ಚಿತ್ರದ ಬಿಡುಗಡೆ ವೇಳೆ ದಾವೆ ಹೂಡಿತ್ತು. 14 ರೀಲ್ಸ್ ಪ್ಲಸ್ ಎಂಟ ರ್ಟೈನ್ಮೆಂಟ್ ನಿರ್ಮಾಣ ಮಾಡಿರುವ ‘ಅಖಂಡ 2’ ಸಿನಿಮಾದ ಬಿಡುಗಡೆಗೆ ತಡೆ ನೀಡಿತ್ತು. ಆದರೆ ಈಗ ಬಾಕಿ ಚುಕ್ತಾ ಆಗಿರುವುದರಿಂದ ನ್ಯಾಯಾಲಯವು ಸಿನಿಮಾದ ಬಿಡುಗಡೆಗೆ ನೀಡಿದ್ದ ತಡೆಯನ್ನು ತೆಗೆದಿದೆ.
ಹೊಸ ಬಿಡುಗಡೆ ದಿನಾಂಕ ಘೋಷಣೆ
ಅತ್ತ ಚಿತ್ರ ಬಿಡುಗಡೆ ಮೇಲಿದ್ದ ತಡೆ ಮದ್ರಾಸ್ ಹೈಕೋರ್ಟ್ ತೆರವು ಮಾಡುತ್ತಲೇ ಇತ್ತ ಚಿತ್ರತಂಡ ಕೂಡ ಹೊಸ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ. ಅದರಂತೆ ‘ಅಖಂಡ 2’ ಸಿನಿಮಾ ಡಿಸೆಂಬರ್ 12 ರಂದು ಅಂದರೆ ಇದೇ ಶುಕ್ರವಾರ ಬಿಡುಗಡೆ ಆಗಲಿದೆ. ಈ ಬಗ್ಗೆ ಈಗಾಗಲೇ ಕೆಲವಾರು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ನಿರ್ಮಾಣ ಸಂಸ್ಥೆಯ ಕಡೆಯಿಂದ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.
Advertisement