

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ದಿ ಡೆವಿಲ್ ಚಿತ್ರವು ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ನಟನ ಅನುಪಸ್ಥಿತಿಯಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ ಚಿತ್ರದ ಗಳಿಕೆ 25 ಕೋಟಿ ರೂ.ಗಳನ್ನು ದಾಟಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭ ಪಡೆದಿದೆ.
ಬಾಕ್ಸ್ ಆಫೀಸ್ ಮೂಲಗಳ ಪ್ರಕಾರ, ದಿ ಡೆವಿಲ್ ಮೊದಲ ದಿನ 13.80 ಕೋಟಿ ರೂ. ಗಳಿಸಿದೆ ಮತ್ತು ಎರಡನೇ ದಿನ ಸುಮಾರು 3.40 ಕೋಟಿ ರೂ. ಗಳಿಸಿದೆ, 3ನೇ ದಿನ 3.80 ಕೋಟಿ ರೂ. ಗಳಿಕೆ ಕಂಡಿದೆ. ವಾರಾಂತ್ಯದಲ್ಲಿ ಚಿತ್ರವು ಸ್ಥಿರವಾದ ಪ್ರದರ್ಶನವನ್ನು ಕಾಯ್ದುಕೊಂಡಿದೆ. ಭಾನುವಾರ ಗಮನಾರ್ಹ ಏರಿಕೆ ದಾಖಲಿಸಿದೆ. ನಾಲ್ಕನೇ ದಿನದ ಸಂಗ್ರಹವು 4.25 ಕೋಟಿ ರೂ.ಗಳನ್ನು ದಾಟಿದ್ದು, ಒಟ್ಟು ಗಳಿಕೆ 25 ಕೋಟಿ ರೂ.ಗಳನ್ನು ಮೀರಿದೆ.
ಕರ್ನಾಟಕದಾದ್ಯಂತ ಸಿಂಗಲ್-ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೆಚ್ಚಿನ ಸಂಖ್ಯೆಯ ಸಿಂಗಲ್ ಸ್ಕ್ರೀನ್‌ಗಳಲ್ಲಿ ದಿ ಡೆವಿಲ್ ಚಿತ್ರ ಪ್ರದರ್ಶನ ಕಾಣುತ್ತಿದ್ದು, ಹೆಚ್ಚಿನ ಜನಸಂದಣಿ ದಾಖಲಾಗಿದೆ. ಡಿಸೆಂಬರ್ 11ರಂದು ಬಿಡುಗಡೆಯಾದ ಡೆವಿಲ್ ಚಿತ್ರವು ಬಾಲಿವುಡ್‌ನ ಧುರಂಧರ್ ಮತ್ತು ಅಖಂಡ 2 ಚಿತ್ರಗಳಿಂದ ಸ್ಪರ್ಧೆಯನ್ನು ಎದುರಿಸುತ್ತಿದೆ. ಇದರ ಹೊರತಾಗಿಯೂ, ಚಿತ್ರವು ತನ್ನ ಓಟವನ್ನು ಮುಂದುವರಿಸಿದೆ.
ರಚನಾ ರೈ ನಟಿಸಿರುವ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಮತ್ತು ಸುಧಾಕರ್ ಎಸ್. ರಾಜ್ ಅವರ ಛಾಯಾಗ್ರಹಣವಿದೆ. 'ತಾರಕ್' ಚಿತ್ರದ ನಂತರ ದರ್ಶನ್ ಮತ್ತು ಪ್ರಕಾಶ್ ವೀರ್ ಮತ್ತೆ ಒಂದಾಗಿದ್ದಾರೆ. ಈ ಚಿತ್ರದಲ್ಲಿ ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಹುಲಿ ಕಾರ್ತಿಕ್, ಚಂದು ಗೌಡ, ರೋಜರ್ ನಾರಾಯಣ್ ಮತ್ತು ವಿನಯ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರವನ್ನು ಶ್ರೀ ಜೈಮಾತಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಜೆ ಜಯಮ್ಮ ಮತ್ತು ಪ್ರಕಾಶ್ ವೀರ್ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಪ್ರಕಾಶ್ ವೀರ್ ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದು, ಆ್ಯಕ್ಷನ್ ಕಟ್ ಹೇಳಿದ್ದಾರೆ.
Advertisement