
ಕೆಜಿಎಫ್, ಸಲಾರ್ ಮತ್ತು ಬಘೀರಾ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಗರುಡ ರಾಮ್ ಇದೀಗ ನಟ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ನಿರ್ಮಿಸಿರುವ ವಿದ್ಯಾಪತಿ ಚಿತ್ರದಲ್ಲಿ ವಿಲನ್ ಆಗಿ ದೊಡ್ಡ ಪರದೆಗೆ ಮರಳಿದ್ದಾರೆ. ಈ ಹಿಂದೆ 'ಇಕ್ಕಟ್' ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ವಿದ್ಯಾಪತಿ ಸಿನಿಮಾದ ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಚಿತ್ರದಲ್ಲಿ ನಾಗಭೂಷಣ್ ಮತ್ತು ಮಲೈಕಾ ಟಿ ವಸುಪಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವರ್ಷ ಏಪ್ರಿಲ್ 10 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.
ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುವ ನಟ ಗರುಡ ರಾಮ್ ವಿದ್ಯಾಪತಿಯಲ್ಲಿ ನಾಗಭೂಷಣ್ ಎದುರಾಳಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದು ಚಿತ್ರದ ನಿರೀಕ್ಷೆಯನ್ನು ಹೆಚ್ಚಿಸುತ್ತದೆ ಎಂದು ಚಿತ್ರತಂಡ ಹೇಳಿದೆ. ಸೆಟ್ ಹಿಂದಿನ ವಿಡಿಯೋದಲ್ಲಿ ಗರುಡ ರಾಮ್ ರಗಡ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ವಿದ್ಯಾಪತಿಯಲ್ಲಿ ರಂಗಾಯಣ ರಘು ಕರಾಟೆ ಮಾಸ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. 2023 ರಲ್ಲಿ ಬಿಡುಗಡೆಯಾದ ಟಗರು ಪಲ್ಯ ಚಿತ್ರದ ನಂತರ ನಟ ಧನಂಜಯ್ ಜೊತೆಗೆ ನಾಗಭೂಷಣ್ ಮತ್ತೆ ಒಂದಾಗಿದ್ದಾರೆ. ಚಿತ್ರಕ್ಕೆ ಮುರಳಿ ಅವರ ಛಾಯಾಗ್ರಹಣ, ಡಾಸ್ಮೋಡ್ ಅವರ ಸಂಗೀತ ಸಂಯೋಜನೆ, ಮುರುಳಿ ಅವರ ನೃತ್ಯ ನಿರ್ದೇಶನ ಮತ್ತು ಅರ್ಜುನ್ ಮಾಸ್ಟರ್ ಅವರು ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಸಂಯೋಜಿಸಲಿದ್ದಾರೆ.
Advertisement