
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಚಿತ್ರೀಕರಣದಲ್ಲಿ ತೊಡಗಿದ್ದು, ಇದೀಗ ಚಿತ್ರದ ಕುರಿತು ಮತ್ತೊಂದು ಅಧಿಕೃತ ಮಾಹಿತಿ ಹೊರಬಿದ್ದಿದೆ.
ಹೌದು... ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಹೀರೋ ಆಗಿರುವ ರಾಕಿಂಗ್ ಸ್ಟಾರ್ ಯಶ್ ಇದೀಗ ತಮ್ಮ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಮೂಲಕ ಪ್ಯಾನ್ ವರ್ಲ್ಡ್ ಹೀರೋ ಆಗುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಟಾಕ್ಸಿಕ್ ಸಿನಿಮಾವನ್ನು ಕೆಜಿಎಫ್ಗಿಂತ ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗುವ ಯೋಚನೆಯಲ್ಲಿದೆ ಚಿತ್ರ ತಂಡ. ಇದೇ ಕಾರಣಕ್ಕೆ ಚಿತ್ರ ತಂಡ ಈ ಸಿನಿಮಾವನ್ನು ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಚಿತ್ರೀಕರಣ ಮಾಡುತ್ತಿದೆ. ಈ ಬಗ್ಗೆ ಚಿತ್ರತಂಡದ ಮೂಲಗಳೇ ಅಧಿಕೃತವಾಗಿ ಮಾಹಿತಿ ನೀಡಿವೆ ಎಂದು ಹೇಳಲಾಗಿದೆ.
ಕನ್ನಡ-ಹಿಂದಿ-ಇಂಗ್ಲಿಷ್ ಸೇರಿ ಹಲವು ಭಾಷೆಗಳಲ್ಲಿ ಚಿತ್ರ
'ಟಾಕ್ಸಿಕ್' ಚಿತ್ರವನ್ನು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪಿಸುವ ಗುರಿ ಹೊಂದಿರುವ ಚಿತ್ರತಂಡ ಇದಕ್ಕಾಗಿ ದೊಡ್ಡ ಮಟ್ಟದಲ್ಲೇ ಯೋಜನೆ ರೂಪಿಸಿದೆ. ಅದರಂತೆ ಈ ಬಿಗ್ ಪ್ರಾಜೆಕ್ಟ್ ಸಿನಿಮಾವನ್ನು ಕನ್ನಡ-ಹಿಂದಿ-ಇಂಗ್ಲಿಷ್ ಸೇರಿದಂತೆ ಹಲವು ದೇಶ ವಿದೇಶ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸಿದೆ. ಕನ್ನಡ, ಇಂಗ್ಲಿಷ್ ಜೊತೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಸೇರಿ ಹಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹಲವು ಭಾಷೆಗಳಲ್ಲಿ ಟಾಕ್ಸಿಕ್ ಸಿನಿಮಾ ಡಬ್ ಆಗಲಿದೆಯಂತೆ. ಟಾಕ್ಸಿಕ್ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಏಕಕಾಲದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು, ದೀರ್ಘಾವಧಿಯ ಶೂಟಿಂಗ್ ವೇಳಾಪಟ್ಟಿಯನ್ನು ಹೊಂದಿದೆ ಎಂದು ತಿಳಿದುಬಂದಿದೆ.
ಭಾರತೀಯ ಹಾಗೂ ಗ್ಲೋಬಲ್ ಆಡಿಯನ್ಸ್ಗೆ ಕನೆಕ್ಟ್ ಆಗುವ ರೀತಿ ಚಿತ್ರದ ನಿರೂಪಣೆಯನ್ನು ರಚಿಸಲಾಗಿದೆ ಎಂದು ಟಾಕ್ಸಿಕ್ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಗೀತು ಮೋಹನ್ ದಾಸ್ ತಿಳಿಸಿದ್ದಾರೆ. ಕೆಜಿಎಫ್ ಮೂಲಕ ಯಶ್ ಸಂಪಾದಿಸಿರುವ ಯಶಸ್ಸನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಸಿನಿಮಾ ಇದಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪೋದು ಚಿತ್ರತಂಡದ ಪ್ರಮುಖ ಧ್ಯೇಯವಾಗಿದೆ. ಮನರಂಜನೆ ಒದಗಿಸುವುದು ಮಾತ್ರವಲ್ಲದೇ ಪ್ರಪಂಚದಾದ್ಯಂತ ಪ್ರೇಕ್ಷಕರ ಹೃದಯದೊಂದಿಗೆ ಸಂಪರ್ಕ ಸಾಧಿಸುವ ಕಥೆಯನ್ನು ರಚಿಸುತ್ತಿದ್ದೇವೆ ಎಂದು ಸಹ ನಿರ್ದೇಶಕರು ತಿಳಿಸಿದ್ದಾರೆ.
ನಾವು ಈಗಾಗಲೇ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಕಥೆಯನ್ನು ಕಟ್ಟಿಕೊಡುವ ಸೂಕ್ಷ್ಮತೆಗಳ ಬಗ್ಗೆ ಶ್ರಮಿಸುತ್ತಿದ್ದೇವೆ. ಸಿನಿಮಾ ನೋಡಿದವರಿಗೆ ಎಲ್ಲಾ ಭಾಷೆಗಳಲ್ಲೂ ನೈಜ ಅನುಭವ ನೀಡಬೇಕು ಆ ನಿಟ್ಟಿನಲ್ಲಿ ಕಥೆಯನ್ನು ಹೆಣೆಯುತ್ತಿದ್ದೇವೆ. ವಿಭಿನ್ನ ಭಾಷೆ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಿರುವ ಪ್ರೇಕ್ಷಕರು ಕೂಡ ಇದನ್ನು ಮೆಚ್ಚಬೇಕು ಎಂಬ ಗುರಿ ನಮ್ಮದಾಗಿದೆ. ಕಲಾತ್ಮಕ ದೃಷ್ಟಿಯ ಸಹಯೋಗದ ಜೊತೆ ಕಮರ್ಷಿಯಲ್ ಆಗಿ ಕಥೆ ಹೇಳುವ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶ ಚಿತ್ರತಂಡದ್ದು ಎಂದು ಹೇಳಿದ್ದಾರೆ. ಇದು ಭಾಷೆ, ಗಡಿ, ಸಂಸ್ಕೃತಿ, ಈ ಎಲ್ಲ ಮೀತಿಗಳನ್ನು ಮೀರಿ ಹೊರಹೊಮ್ಮುಚ ಚಿತ್ರವಾಗಬೇಕು ಎಂಬ ಗುರಿ ನಮ್ಮದಾಗಿದೆ ಎಂದು ಗೀತು ಹೇಳಿದ್ದಾರೆ.
ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ವೆಂಕಟ್ ಕೆ ನಾರಾಯಣ್ಅವರ ಕೆವಿಎನ್ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿರುವ ಈ ಚಿತ್ರ ಕನ್ನಡ, ಇಂಗ್ಲಿಷ್ನಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು, ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಿದೆ ಚಿತ್ರತಂಡ. ಚಿತ್ರ ಬಿಗ್ ಬಜೆಟ್ನಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದು ವರದಿಯಾಗಿದೆ.
ದಾಖಲೆ
ಈ ಮೂಲಕ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಏಕಕಾಲದಲ್ಲಿ ತಯಾರಾಗುತ್ತಿರುವ ಮೊದಲ ಬಿಗ್ ಬಜೆಟ್ ಚಿತ್ರ ಎಂಬ ದಾಖಲೆಗೂ ಪಾತ್ರವಾಗುತ್ತಿದೆ.
Advertisement