
ತೀವ್ರ ನಿರೀಕ್ಷೆ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳಿದ್ದು, ಮುಂಬೈ ಮತ್ತು ಗೋವಾದಲ್ಲಿ ಚಿತ್ರೀಕರಣ ಪೂರೈಸಿದ ನಂತರ ಇದೀಗ ಚಿತ್ರತಂಡ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಿಸಿದೆ.
ಟಾಕ್ಸಿಕ್ ಚಿತ್ರಕ್ಕಾಗಿ ಒಂದಾಗಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಇದೀಗ ಉದ್ಯಾನ ನಗರಿಯಲ್ಲಿ ಒಟ್ಟಾಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಎಲ್ಲರೂ ತಮ್ಮ ಕೆಲವು ಭಾಗಗಳನ್ನು ಚಿತ್ರೀಕರಣ ನಡೆಸಿದ್ದು, ಇದೀಗ ಒಟ್ಟಾಗಿ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸೆಟ್‌ನಲ್ಲಿ ಎಲ್ಲರೂ ಉತ್ತಮ ಬಾಂಧವ್ಯದಿಂದ ಇರುವುದಾಗಿ ಮೂಲಗಳು ತಿಳಿಸಿವೆ. ಇತ್ತೀಚೆಗೆ ಹುಮಾ ಖುರೇಷಿ ಅವರು ತಮ್ಮ ಪುಸ್ತಕ ಝೀಬಾವನ್ನು ಬಿಡುಗಡೆ ಮಾಡಿದ್ದಾರೆ. ಟಾಕ್ಸಿಕ್ ಚಿತ್ರದ ಎಲ್ಲ ಪಾತ್ರವರ್ಗಗಳಿಗೆ ತನ್ನ ಪುಸ್ತಕದ ಪ್ರತಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ಅವರು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹುಮಾ ಅವರ ಈ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಬಹು ತಾರಾಗಣವನ್ನು ಹೊಂದಿರುವ ಟಾಕ್ಸಿಕ್ ಚಿತ್ರದ ಚಿತ್ರೀಕರಣ ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು, 2025ರ ಕೊನೆಯಲ್ಲಿ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿರಬಹುದು ಎಂದು ಹೇಳಲಾಗಿದೆ. ಆದರೆ, ಚಿತ್ರತಂಡ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಬ್ರಿಟಿಷ್ ನಟರಾದ ಡ್ಯಾರೆಲ್ ಡಿ'ಸಿಲ್ವಾ ಮತ್ತು ಬೆನೆಡಿಕ್ಟ್ ಗ್ಯಾರೆಟ್ ಅವರು ಟಾಕ್ಸಿಕ್‌ನಲ್ಲಿ ನಟಿಸುತ್ತಿದ್ದು, ಇದು ಚಿತ್ರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿದೆ. ಚಿತ್ರಕ್ಕೆ ರಾಜೀವ್ ರವಿ ಅವರ ಛಾಯಾಗ್ರಹಣ ಮಾಡಿದ್ದು, ಪ್ರಮುಖ ಆ್ಯಕ್ಷನ್ ಸೀಕ್ವೆನ್ಸ್‌ಗಳು ಈ ಕಥಾಹಂದರದ ಭಾಗವಾಗಿದೆ. ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾದ ವಿಶೇಷ ಟೈಟಲ್ ಟೀಸರ್ ಅನ್ನು ಜೆರೆಮಿ ಸ್ಟಾಕ್ ನಿರ್ದೇಶಿಸಿದ್ದರೆ, ರವಿ ಬಸ್ರೂರ್ ಅವರ ಸಂಗೀತ ಸಂಯೋಜನೆಯಿದೆ.
ಬಹು ಭಾಷೆಗಳಲ್ಲಿ ತಯಾರಾಗುತ್ತಿರುವ ಟಾಕ್ಸಿಕ್ ಚಿತ್ರವನ್ನು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜೊತೆಗೆ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿದೆ.
Advertisement