
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದ ಬಳಿಕ ನಟ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವಾಗ ಮಾಡುತ್ತಾರೆ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಅದಾದ ಎರಡು ವರ್ಷಗಳ ಬಳಿಕ ಯಶ್, 2023ರ ಡಿಸೆಂಬರ್‌ನಲ್ಲಿ ತಮ್ಮ ಮುಂದಿನ ಸಿನಿಮಾ 'ಟಾಕ್ಸಿಕ್' ಘೋಷಣೆ ಮಾಡಿದ್ದರು. ಅದಾದ ನಂತರ ಇದೇ ಮೊದಲ ಬಾರಿಗೆ ನಟ ಯಶ್ ತಮ್ಮ ಬಹು ನಿರೀಕ್ಷಿತ ' Toxic: A Fairy Tale for Grown-ups' ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ.
ಜನವರಿ 8ರಂದು ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಈ ಮೂಲಕ ಯಶ್ ಅಭಿಮಾನಿಗಳಿಗೆ ಡಬಲ್ ಖುಷಿ ಸಿಕ್ಕಂತಾಗಿದೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ನಟ, Unleashing him… ಎಂದು ಬರೆದುಕೊಂಡಿದ್ದಾರೆ. ಚಿತ್ರದ ಪೋಸ್ಟರ್ ಸಖತ್ ಗಮನ ಸೆಳೆಯುತ್ತಿದ್ದು, ರೆಟ್ರೋ ಸ್ಟೈಲ್ ಕಾರಿನ ಪಕ್ಕ ನಿಂತಿರುವ ಯಶ್ ಸಿಗರೇಟ್ ಸೇದುತ್ತಿದ್ದು, ತಲೆಗೆ ಟೋಪಿ ಧರಿಸಿದ್ದಾರೆ.
ನಟ ಯಶ್ ಬರ್ತಡೇ ಪ್ರಯುಕ್ತ ಜನವರಿ 8ರಂದು ಬೆಳಿಗ್ಗೆ 10.25ಕ್ಕೆ ಸಿನಿಮಾದ ತುಣುಕನ್ನು ರಿಲೀಸ್ ಮಾಡುವುದಾಗಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಹೇಳಿದೆ. ಅದೇ ಪೋಸ್ಟರ್ ಹಂಚಿಕೊಂಡಿದ್ದು, 'ಆಶ್ಚರ್ಯಗಳು ಬಾಗಿಲು ಬಡಿಯುವುದಿಲ್ಲ... ಅವುಗಳು ಹಾಗೇ ತೆರೆದುಕೊಳ್ಳುತ್ತವೆ' ಎಂದು ಬರೆದಿದೆ.
KVN ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ಸ್ವತಃ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಮಲಯಾಳಂನ ಗೀತು ಮೋಹನ್‌ದಾಸ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಟಾಕ್ಸಿಕ್ ಚಿತ್ರವು ಯಶ್ ನಟನೆಯ 19ನೇ ಸಿನಿಮಾವಾಗಿದ್ದು, 2024ರ ಆಗಸ್ಟ್‌ನಲ್ಲಿ ಚಿತ್ರೀಕರಣ ಆರಂಭಿಸಲಾಗಿತ್ತು. ಬೆಂಗಳೂರಿನ ಎಚ್‌ಎಂಟಿ ಮೈದಾನದಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸಿರುವ ಚಿತ್ರತಂಡ ಇದೀಗ ಮುಂಬೈನತ್ತ ಪ್ರಯಾಣ ಬೆಳೆಸಿದೆ.
ಟಾಕ್ಸಿಕ್ ಸಿನಿಮಾವನ್ನು ವಿಶ್ವದರ್ಜೆಯ ಸಿನಿಮಾವನ್ನಾಗಿ ಮಾಡುವ ಮಹತ್ವಾಕಾಂಕ್ಷೆಯನ್ನು ಯಶ್ ಹೊಂದಿದ್ದು, ಹಾಲಿವುಡ್‌ನ ಪ್ರಮುಖ ನಿರ್ಮಾಣ ಸಂಸ್ಥೆಯಾದ 20 ಸೆಂಚುರಿ ಫಾಕ್ಸ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಮಾತ್ರವಲ್ಲದೆ ವಿಶ್ವದ ಹಲವು ಭಾಷೆಗಳಲ್ಲಿ ಸಿನಿಮಾ ಏಕಕಾಲಕ್ಕೆ ತೆರೆಗೆ ಬರಲಿದೆ ಎನ್ನಲಾಗಿದೆ.
ಜ. 8ರಂದು ತಾನು ಬೆಂಗಳೂರಿನಲ್ಲಿ ಇರುವುದಿಲ್ಲ. ಹೀಗಾಗಿ, ಹುಟ್ಟುಹಬ್ಬದ ಆಚರಣೆ ಮಾಡಲ್ಲ ಎಂದು ಯಶ್ ಈಗಾಗಲೇ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. 'ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ' ಎಂದು ಯಶ್ ಬರೆದುಕೊಂಡಿದ್ದರು.
Advertisement