
ಮುಂಬೈ: ಹಳೆಯ ಚೆಕ್ ಬೌನ್ಸ್ ಪ್ರಕರಣದಲ್ಲಿ ತೆಲುಗಿನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರಿಗೆ ಮುಂಬೈ ನ್ಯಾಯಾಲಯವು ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಏಳು ವರ್ಷ ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಕೊನೆಗೂ ಇಂದು ತೀರ್ಪು ಹೊರಬಿದ್ದಿದೆ.
ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಂಗಳವಾರ (ಜ. 21) ಚೆಕ್ ಬೌನ್ಸ್ ಪ್ರಕರಣದ ತೀರ್ಪನ್ನು ನೀಡಬೇಕಿತ್ತು. ಆದರೆ, ರಾಮ್ ಗೋಪಾಲ್ ವರ್ಮಾ ನ್ಯಾಯಾಲಯಕ್ಕೆ ಗೈರಾಗಿದ್ದರಿಂದ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ ಎಂದು ವರದಿಯಾಗಿದೆ.
ಜೈಲು ಶಿಕ್ಷೆಯ ಜೊತೆಗೆ, ದೂರುದಾರರಿಗೆ ಪರಿಹಾರವಾಗಿ 3.75 ಲಕ್ಷ ರೂಪಾಯಿಗಳನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಮೂರು ತಿಂಗಳಲ್ಲಿ ಪರಿಹಾರ ಪಾವತಿಸಲು ವಿಫಲವಾದರೆ, ಹೆಚ್ಚುವರಿಯಾಗಿ ಮೂರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೂಚಿಸಿದೆ.
2018ರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಮುಂಬೈನಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಮಹೇಶ್ಚಂದ್ರ ಮಿಶ್ರಾ ಎಂಬುವವರು ವರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದರು. 2022ರ ಜೂನ್‌ನಲ್ಲಿ ವರ್ಮಾ ಅವರಿಗೆ ವೈಯಕ್ತಿಕ ಬಾಂಡ್ ಮತ್ತು 5000 ರೂ. ಭದ್ರತಾ ಠೇವಣಿ ನೀಡಿದ ನಂತರ ಜಾಮೀನು ನೀಡಲಾಗಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಹಲವು ಬಾರಿ ನೋಟಿಸ್ ನೀಡಿದ್ದರೂ, ರಾಮ್ ಗೋಪಾಲ್ ವರ್ಮಾ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಹಲವಾರು ವಿಚಾರಣೆಗಳು ಮತ್ತು ಕಾನೂನು ಪ್ರಕ್ರಿಯೆಗಳ ನಂತರ, ನ್ಯಾಯಾಲಯವು ನಿರ್ದೇಶಕ ವರ್ಮಾ ವಿರುದ್ಧ ತೀರ್ಪು ನೀಡಿದೆ. ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದು ಹೇಳಿದೆ.
Advertisement