
ಯುವ ರಾಜ್‌ಕುಮಾರ್ ಅಭಿನಯದ 'ಎಕ್ಕ' ಚಿತ್ರ ಈಗಾಗಲೇ ತೀವ್ರ ನಿರೀಕ್ಷೆ ಮೂಡಿಸಿದ್ದು, ಆನಂದ್ ಆಡಿಯೋದಲ್ಲಿ ಬಿಡುಗಡೆಯಾದ 'ಬ್ಯಾಂಗಲ್ ಬಂಗಾರಿ' ಹಾಡು ಕೇವಲ 22 ದಿನಗಳಲ್ಲಿ 11 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ವೈರಲ್ ಆಗಿರುವ ಈ ಹಾಡು ಈಗ ಟಾಪ್ ಟ್ರೆಂಡಿಂಗ್ ಮ್ಯೂಸಿಕ್‌ನಲ್ಲಿ ಮೊದಲನೇ ಸ್ಥಾನದಲ್ಲಿದೆ.
ಈ ರೋಮಾಂಚಕ ಹಾಡಿನಲ್ಲಿ ಯುವ ರಾಜ್‌ಕುಮಾರ್ ಮತ್ತು ಸಂಜನಾ ಆನಂದ್ ಕಾಣಿಸಿಕೊಂಡಿದ್ದು, ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿ, ಕಣ್ಮನ ಸೆಳೆಯುವ ನೃತ್ಯ ಸಂಯೋಜನೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಹಲವಾರು ಅಭಿಮಾನಿಗಳು ಈ ಟ್ರ್ಯಾಕ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಮಾಡುತ್ತಿದ್ದಾರೆ.
ನಾಗಾರ್ಜುನ್ ಶರ್ಮಾ ಬರೆದು ಗಾಯಕ ಆಂಥೋನಿ ದಾಸನ್ ಹಾಡಿರುವ ಈ ಹಾಡಿಗೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ನೃತ್ಯ ಸಂಯೋಜಕ ಮುರಳಿ ಮಾಸ್ಟರ್ ಅವರ ಕೊರಿಯೋಗ್ರಫಿ ಇದೆ. ಈ ಹಾಡು ಸ್ಥಳೀಯ ಶೈಲಿಯಲ್ಲಿದ್ದು, ಪ್ರೇಕ್ಷಕರೊಂದಿಗೆ ಕನೆಕ್ಟ್ ಆಗುತ್ತಿದೆ.
ಚಿತ್ರದಲ್ಲಿ ಸಂಪದ ಮತ್ತು ಸಂಜನಾ ಆನಂದ್ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ ಅತುಲ್ ಕುಲಕರ್ಣಿ ಮತ್ತು ಡೆಡ್ಲಿ ಆದಿತ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಸತ್ಯ ಹೆಗ್ಡೆ ಅವರ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಅವರ ಸಂಕಲನವಿದೆ.
Advertisement