
ಶಿವರಾಜ್‌ಕುಮಾರ್ ನಟನೆ ಆ್ಯಕ್ಷನ್-ಥ್ರಿಲ್ಲರ್ ಚಿತ್ರ 'ಘೋಸ್ಟ್'ಗೆ ಹೆಸರುವಾಸಿಯಾದ ನಿರ್ದೇಶಕ ಶ್ರೀನಿ ಇದೀಗ 'ಬೀರ್‌ಬಲ್ 2' ಚಿತ್ರದ ಮೂಲಕ ಮರಳಲು ಸಿದ್ಧರಾಗಿದ್ದಾರೆ. 'ಬೀರ್‌ಬಲ್' ಚಿತ್ರದ ಸೀಕ್ವೆನ್ಸ್ ಅಧಿಕೃತವಾಗಿ ಆರಂಭವಾಗಿದ್ದು, ಹೈ ಪ್ರೊಫೈಲ್ ಕೆವಿಎನ್ ಪ್ರೊಡಕ್ಷನ್ಸ್ ಈ ಯೋಜನೆಗೆ ಬೆಂಬಲ ನೀಡುತ್ತಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ನಟ ಧ್ರುವ ಸರ್ಜಾ ಅಭಿನಯದ 'ಕೆಡಿ' ಮತ್ತು ತಮಿಳು ಸೂಪರ್‌ಸ್ಟಾರ್ ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರಕ್ಕೆ ವೆಂಕಟ್ ಕೆ ನಾರಾಯಣ ಈಗಾಗಲೇ ಬೆಂಬಲ ನೀಡುತ್ತಿದ್ದಾರೆ.
ಈ ಯೋಜನೆಯ ವಿವರಗಳನ್ನು ಗೌಪ್ಯವಾಗಿಡಲಾಗಿದ್ದರೂ, ಬೀರ್‌ಬಲ್ 2 ಸದ್ದಿಲ್ಲದೆ ಔಪಚಾರಿಕ ಮುಹೂರ್ತದೊಂದಿಗೆ ಪ್ರಾರಂಭವಾಗಿದೆ ಮತ್ತು ಈ ವಾರದ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಸಿನಿಮಾ ಎಕ್ಸ್‌ಪ್ರೆಸ್‌ಗೆ ತಿಳಿದುಬಂದಿದೆ.
ಶ್ರೀನಿ ಈ ಹಿಂದೆ ಬೀರ್‌ಬಲ್ ಪಾತ್ರವನ್ನು ಘೋಸ್ಟ್‌ನಲ್ಲಿ ಸೂಕ್ಷ್ಮವಾಗಿ ಸೇರಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇದು ಸಂಭಾವ್ಯ ಕ್ರಾಸ್‌ಒವರ್ ಬಗ್ಗೆ ಗುಸುಗುಸು ಹುಟ್ಟಿಸಿತು. ಇದೀಗ ವಿಶಿಷ್ಟವಾದ ಘೋಸ್ಟ್-ಬೀರ್ಬಲ್ ಮಲ್ಟಿವರ್ಸ್ ಆಗಿ ಕಾರ್ಯರೂಪಕ್ಕೆ ಬಂದಿದ್ದು, ಮುಂಬರುವ ಸೀಕ್ವೆಲ್‌ಗೆ ಹೊಸ ಆಯಾಮ ನೀಡಲಿದೆ.
2019ರಲ್ಲಿ ಬಿಡುಗಡೆಯಾದ ಮೂಲ ಬೀರ್‌ಬಲ್: ಕೇಸ್ 1' ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್ ನಟಿಸಿದ್ದರು. ಅದಾದ ಬಳಿಕ ಅವರು ರಕ್ಷಿತ್ ಶೆಟ್ಟಿ ಜೊತೆ ಸಪ್ತ ಸಾಗರದಾಚೆ ಎಲ್ಲೋ ಮತ್ತು ಶ್ರೀಮುರಳಿ ಜೊತೆ ಬಘೀರ ಸೇರಿದಂತೆ ಇತರ ಚಿತ್ರಗಳಲ್ಲಿ ನಟಿಸಿದ್ದಾರೆ. ಆದಾಗ್ಯೂ, ಬೀರ್‌ಬಲ್ 2 ಚಿತ್ರದಲ್ಲಿ ರುಕ್ಮಿಣಿ ವಸಂತ್ ಇರುವುದಿಲ್ಲ ಎಂದು ತಿಳಿದುಬಂದಿದೆ ಮತ್ತು ಶ್ರೀನಿ ಹೊಸ ನಾಯಕಿಯ ಹುಡುಕಾಟದಲ್ಲಿದ್ದಾರೆ.
ಪಾತ್ರವರ್ಗ ಮತ್ತು ಸಿಬ್ಬಂದಿ ಕುರಿತು ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದೆ. ಶ್ರೀನಿ ಮತ್ತು ಕೆವಿಎನ್ ಪ್ರೊಡಕ್ಷನ್ಸ್‌ನಿಂದ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
Advertisement